ಪಾಸ್​ಪೋರ್ಟ್ ಬಳಿಸಿ ಬೆಂಗಳೂರಿಗೆ ಬಂದಿಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೆರೆ

ಬೆಂಗಳೂರು,ಏ.8- ನಕಲಿ ಭಾರತೀಯ ಪಾಸ್​ಪೋರ್ಟ್ ಬಳಿಸಿ ವಿಮಾನದಲ್ಲಿ ನಗರಕ್ಕೆ ಬಂದಿದ್ದ ಇಬ್ಬರು ಬಾಂಗ್ಲಾದೇಶದ ಪ್ರಜೆಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಲಿಯಾಕತ್ ಅಲಿ ಮತ್ತು ರಿಜಾವುಲ್ ಶೇಖ್​ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಏಪ್ರಿಲ್ 7 ರ ಶುಕ್ರವಾರ ಸಿಂಗಾಪುರದಿಂದ ಇಂಡಿಗೊ ವಿಮಾನ 6 ಇ 1006 ನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಇಬ್ಬರ ಪಾಸ್​ಪೋರ್ಟ್​ಗಳನ್ನು ಪರಿಶೀಲಿಸಿದಾಗ ಬೇರೆಯವರ ಹೆಸರಿನಲ್ಲಿ ಮೋಸದಿಂದ ಭಾರತೀಯ ಪಾಸ್​ಪೋರ್ಟ್ ಹೊಂದಿರುವುದು ಕಂಡುಬಂದಿದೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಅಧಿಕಾರಿಯ ದೂರಿನ ಆಧಾರದ ಮೇಲೆ, ಪಾಸ್​ಪೋರ್ಟ್ ಕಾಯ್ದೆಯ ಸೆಕ್ಷನ್ 12 (1 ಎ) (ಎ) (ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸುವುದು ಅಥವಾ ಅವರ ರಾಷ್ಟ್ರೀಯತೆಯ ಬಗ್ಗೆ ಮಾಹಿತಿಯನ್ನು ಮರೆಮಾಚುವ ಮೂಲಕ ಪಾಸ್​ಪೋರ್ಟ್ ಪಡೆಯುವುದು ಅಥವಾ ನಕಲಿ ಪಾಸ್​ಪೋರ್ಟ್ ಅಥವಾ ಯಾವುದೇ ಪ್ರಯಾಣ ದಾಖಲೆಯನ್ನು ಹೊಂದಿರುವುದು) ಮತ್ತು 14 (ಎ) (ಎ) (ಭಾರತದ ಯಾವುದೇ ಪ್ರದೇಶವನ್ನು ಪ್ರವೇಶಿಸುವುದು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿದೇಶಿಯರ ಕಾಯ್ದೆಯ ಪ್ರಕಾರ ಮಾನ್ಯ ದಾಖಲೆಗಳಿಲ್ಲದೆ ಭಾರತದ ಯಾವುದೇ ಪ್ರದೇಶಕ್ಕೆ ಪ್ರವೇಶಿಸುವುದು ಅಥವಾ ಉಳಿಯುವುದನ್ನು ನಿರ್ಬಂಧಿಸಲಾಗಿದೆ. ಈ ಕುರಿತಾಗಿ ಮುಂದಿನ ದಿನಗಳಲ್ಲಿ ತನಿಖೆ ನಡೆಯಲಿದೆ. ನಾವು ಈಗಷ್ಟೇ ಪ್ರಕರಣ ದಾಖಲಿಸಿದ್ದೇವೆ ಮತ್ತು ಅವರು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.