ಪಾಸಿಟಿವ್ ರೋಗಿಯ ಮನೆಗೆ ಔಷಧಿ ಕಿಟ್ ನೀಡಲು ಒತ್ತಾಯ

ರಾಯಚೂರು.ಮೇ.೦೩- ರೋಗಲಕ್ಷಣಗಳಿಲ್ಲದ, ಸೌಮ್ಯಲಕ್ಷಣಗಳಿರುವ ಕೋವಿಡ್ ಪಾಜಿಟಿವ್ ರೋಗಿಯ ಮನೆಗೆ ಔಷಧಿ ಕಿಟ್ ನೀಡಬೇಕೆಂದು ಒತ್ತಾಯಿಸಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಅವರು ಒತ್ತಾಯಿಸಿದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರಕಾರಕ್ಕೆ ಮತ್ತು ಸ್ಥಳೀಯ ಆಡಳಿತಕ್ಕೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಸೂಕ್ತ ಹಾಸಿಗೆ ವ್ಯವಸ್ಥೆ ಮಾಡಲು ಸಾಧ್ಯವಾಗದೇ ಇರುವದು ಸಾರ್ವಜನಿಕರಿಗೆ ಆತಂಕವಾಗಿದೆ ಎಂದು ದೂರಿದರು. ರೋಗಿಗೆ ಕೋವಿಡ್ ಪಾಜಿಟಿವ್ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಬಹುತೇಕ ಪ್ರಕರಣಗಳಲ್ಲಿ ವರದಿಯನ್ನು ಮೊಬೈಲ್ ಮೂಲಕ ಮೆಸೆಜ್ ಕಳುಹಿಸುತ್ತಿದೆ. ಆದರೆ ಅಂತಹ ರೋಗಿಗಗಳಿಗೆ ಚಿಕಿತ್ಸೆ, ಆಸ್ಪತ್ರೆ ಹಾಗೂ ಹಾಸಿಗೆಗಳ ಬಗ್ಗೆ ಮಾಹಿತಿಯನ್ನು ನೀಡದೇ ಇರುವದು ಸರಿಯಾದುದಲ್ಲ. ಕೋವಿಡ್ ಪ್ರಕರಣಗಳಲ್ಲಿ ತೀವ್ರ ರೋಗಲಕ್ಷಣಗಳಿರುವ ರೋಗಿಗಳನ್ನು ತುರ್ತಾಗಿ ಆಸ್ಪತ್ರೆಗಳಿಗೆ ದಾಖಲಿಸುವ ಅವಶ್ಯಕತೆ ಇದೆ, ಅಂತಹ ರೋಗಿಗಳನ್ನು ಗುರುತಿಸಿ ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸುವದು ಅಥವಾ ಪ್ರತ್ಯೇಕಗೊಳಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದರು.
ಕೋವಿಡ್ ಪಾಜಿಟಿವ್ ಇದ್ದು, ರೋಗಲಕ್ಷಣಗಳಿಲ್ಲದ, ಸೌಮ್ಯಲಕ್ಷಣಗಳಿರುವ ಇದ್ದಲ್ಲಿ ಅಂತಹ ರೋಗಿಗಳು ಮನೆಗಳಲ್ಲೇ ಚಿಕಿತ್ಸೆ ಪಡೆಯಲು ಬಯಸಿದಲ್ಲಿ ಅವರಿಗೆ ಔಷಧಿಗಳನ್ನು ನೀಡಬೇಕು. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ ೪೦೦-೫೦೦ ಕೋವಿಡ್ ಪಾಜಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಕೋವಿಡ್ ರೋಗಲಕ್ಷಣಗಳಿಲ್ಲದ, ಸೌಮ್ಯಲಕ್ಷಣಗಳಿರುವ ಪ್ರಕರಣಗಳು ಇರುವದೇ ಹೆಚ್ಚಾಗಿವೆ ಎನ್ನಲಾಗುತ್ತಿದೆ.
ಅಂತಹ ರೋಗಿಗಳನ್ನು ಗುರುತಿಸಿ ಅವರಿಗೆ ಜಿಲ್ಲಾಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದ ಔಷಧಿಗಳ ಮೆಡಿಕಲ್ ಕಿಟ್ಟನ್ನು ಮನೆ ಮನೆಗೆ ತಲಿಪಿಸುವ ಮೂಲಕ ಕೋವಿಡ್ ರೋಗಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಸರಕಾರ ನಿಮ್ಮ ಜೊತೆಗೆ ಇದೆ ಎನ್ನುವ ಧೈರ್ಯ ನೀಡಬೇಕು ಹಾಗೂ ಚಿಕಿತ್ಸೆಗೆ ನೆರವಾಗಬೇಕು. ಜಿಲ್ಲಾಡಳಿತ ಬಯಸಿದಲ್ಲಿ ಸಾಕಷ್ಟು ಸಂಘ ಸಂಸ್ಥೆಗಳು ಇಂತಹ ಮೆಡಿಕಲ್ ಕಿಟ್ಟನ್ನು ರೋಗಿಗಳ ಮನೆ ಮನೆಗೆ ತಲುಪಿಸಲು ಸಹಾಯ ಮಾಡಲು ಸಿದ್ದರಿರುವದು ಹಿಂದಿನ ಅವಧಿಯಲ್ಲಿ ಸಂಘ ಸಂಸ್ಥೆಯವರು ಮಾಡಿದ ಕೆಲಸವೇ ಸಾಕ್ಷಿಯಾಗಿದೆ.
ಆದರೆ, ಜಿಲ್ಲೆಯಲ್ಲಿ ಕೋವಿಡ್ ಪಾಜಿಟಿವ್ ವರದಿ ಎಂದು ಮೊಬೈಲ್ ಮೂಲಕ ಮೆಸೆಜ್ ಕಳುಹಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕಿತ್ಸೆ ಬಗ್ಗೆ ಮಾಹಿತಿ ನೀಡದೇ ಇರುವದರಿಂದ ಬಹುತೇಕ ರೋಗಿಗಳು ಸಾರ್ವಜನಿಕ ಸ್ಥಳಗಳಲ್ಲಿ ತಿರುಗುತ್ತಿರುವದು ಕೋವಿಡ್ ಪ್ರಕರಣಗಳು ಹೆಚ್ಚಾಗಲು ಕಾರಣವಿರಬಹುದು. ಅದಲ್ಲದೇ ರೋಗಿ ಕೋವಿಡ್ ಪಾಜಿಟಿವ್ ಎಂದು ವರದಿ ಬಂದರೂ ಬೇರೆಯವರಿಗೆ ತಿಳಿಸಲು ಹಿಂಜರಿಯುತ್ತಿರುವದು ಕಂಡುಬರುತ್ತಿದೆ.
ಕಾರಣ, ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಕೋವಿಡ್ ಪಾಜಿಟಿವ್ ವರದಿ ಇದ್ದು, ರೋಗಲಕ್ಷಣಗಳಿಲ್ಲದ, ಸೌಮ್ಯಲಕ್ಷಣಗಳಿರುವ ರೋಗಿಗಳಿಗೆ ಸೂಕ್ತ ಔಷಧಿ ಇರುವ ಮೆಡಿಕಲ್ ಕಿಟ್‌ನ್ನು ರೋಗಿಗಳ ಮನೆಗಳಿಗೆ ತಲುಪಿಸಬೇಕೆಂದು ಆಗ್ರಹಿಸಿದರು.