ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುವ ವಿಶ್ವಾಸವಿದೆ: ಚವ್ಹಾಣ

ಬೀದರ:ಮೇ.21: ಜಿಲ್ಲೆಯಲ್ಲಿ ಕೋವಿಡ್ ಪಾಜಿಟೀವ್ ಪ್ರಕರಣಗಳು ಇನ್ನೂ ಕಡಿಮೆಯಾಗುವ ವಿಶ್ವಾಸವಿದೆ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕೇಸುಗಳು ತಗ್ಗುತ್ತವೆ ಎಂದು ಖುಷಿ ಪಡುವಂತಿಲ್ಲ. ಪಾಜಿಟಿವಿಟಿ ಪ್ರಮಾಣ ಶೂನ್ಯಕ್ಕೆ ಬರುವವರೆಗೆ ಎಲ್ಲರೂ ಒಗ್ಗೂಡಿ ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಮೇ 20ರಂದು 94 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಐದು ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಹೊಸದಾಗಿ 39 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್‍ನಿಂದ ಗುಣಮುಖರಾಗಿ 334 ಜನರು ಬಿಡುಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಯಾವುದೇ ಕಡೆಗಳಲ್ಲಿ ಬೆಡ್, ರೆಮ್‍ಡಿಸಿವರ್ ಕೊರತೆ ಇಲ್ಲ ಎಂದು ತಿಳಿಸಿದ ಸಚಿವರು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‍ನಿಂದ ಉತ್ತಮ ಕಾರ್ಯಗಳಾಗುತ್ತಿವೆ ಎಂದರು.
ಕೋವಿಡ್-19 ಎರಡನೇ ಅಲೆಯ ಅಬ್ಬರಕ್ಕೆ ತತ್ತರಿಸಿದ್ದ ಅಸಂಘಟಿತ ವಲಯದ ಕಾರ್ಮಿಕರಿಗೆ, ರೈತರಿಗೆ ಮತ್ತು ಇನ್ನಿತರ ವಲಯಗಳಿಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಘೋಷಿಸಿರುವ 1250 ರೂ ಕೋಟಿಯ ಕೋವಿಡ್ ರಿಲೀಪ್ ಪ್ಯಾಕೇಜ್‍ನಿಂದ ಅನುಕೂಲವಾಗಲಿದೆ ಎಂದು ಇದೆ ವೇಳೆ ಸಚಿವರು ತಿಳಿಸಿದರು.
ಮೇ.24ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಪರಿಸ್ಥಿತಿ ನೋಡಿಕೊಂಡು ಮೇ.24ರ ನಂತರವೂ ಲಾಕ್‍ಡೌನ್ ಮುಂದುವರೆಸಬೇಕೋ ಬೇಡವೋ ಎಂದು ಎರಡ್ಮೂರು ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಇದೆ ವೇಳೆ ಸಚಿವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದರು.