ಜಾಲಿಹಾಳ್ ರಾಜಾಸಾಬ್
ಸಿರುಗುಪ್ಪ, ಜೂ.15: ಪಟ್ಟಣದ ವತಿಯಿಂದ ಹೂ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಮಳಿಗೆಗಳನ್ನು ನಿರ್ಮಿಸಿ ವರ್ಷಗಳೇ ಕಳೆದರೂ ಅವು ಬಳಕೆಯಾಗದೆ ಪಾಳು ಬಿದ್ದಿವೆ.
ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಮಾರುಕಟ್ಟೆಯಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಹೂ, ಹಣ್ಣು ಮತ್ತು ತರಕಾರಿ ಮಾರುವ ವ್ಯಾಪಾರಸ್ಥರು ಮಳಿಗೆಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಕಳೆದುಕೊಂಡಿದ್ದಾರೆ. ಉತ್ತಮ ವ್ಯವಸ್ಥೆಯಲ್ಲಿ ವ್ಯಾಪಾರ–ವಹಿವಾಟು ಮಾಡುವ ಅವರ ಕನಸು ನನಸಾಗುವ ಲಕ್ಷಣವೇ ಕಾಣುತ್ತಿಲ್ಲ.
ಪುರಸಭೆಯವರು ಕಟ್ಟಡ ನಿರ್ಮಿಸಿಕೊಟ್ಟರೂ ವ್ಯಾಪಾರಸ್ಥರು ಬರುತ್ತಿಲ್ಲ ಎಂದು ದೂರುತ್ತಾರೆ. ಆದರೆ ಮಳಿಗೆಯಲ್ಲಿ ವಿದ್ಯುತ್, ನೀರು ಮತ್ತು ಇನ್ನಿತರ ಮೂಲಸೌಕರ್ಯ ಇಲ್ಲದೇ ಯಾವ ರೀತಿಯಲ್ಲಿ ವ್ಯಾಪಾರ–ವಹಿವಾಟು ಮಾಡಲು ಸಾಧ್ಯ? ಬರೀ ಕಟ್ಟಡ ನಿರ್ಮಿಸಿಕೊಟ್ಟರೆ ಸಾಕೇ? ಅಲ್ಲಿ ವ್ಯಾಪಾರ–ವಹಿವಾಟಿಗೆ ಅನುಕೂಲ ಮಾಡಿಕೊಡುವಂತಹ ವಾತಾವರಣ ಮೂಡಿಸುವುದು ಬೇಡವೇ ಎಂದು ತರಕಾರಿ ವ್ಯಾಪಾರಸ್ಥರು ಪ್ರಶ್ನಿಸುತ್ತಾರೆ.
ಪುರಸಭೆಯವರು ಅವಸರದಲ್ಲಿ ಕಟ್ಟಡವನ್ನು ನಿರ್ಮಿಸಿದ್ದಾರೆ. ತೋರಿಕೆಗೆ ಅವುಗಳನ್ನು ವ್ಯಾಪಾರಸ್ಥರಿಗೆ ನೀಡುವ ಇಚ್ಛೆ ಹೊಂದಿಲ್ಲ. ಇದರ ಪರಿಣಾಮವಾಗಿ ಎಲ್ಲಾ ಮಳಿಗೆಗಳು ಪಾಳು ಬಿದ್ದಿವೆ. ಯಾರು ಬೇಕಾದರೂ ಅಲ್ಲಿ ಹೋಗಿ ಗಲೀಜು ಮಾಡಬಹುದು ಅಥವಾ ಹಾನಿ ಮಾಡಬಹುದು. ಅದನ್ನು ಯಾರೂ ಸಹ ಪ್ರಶ್ನೆ ಮಾಡದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಪುರಸಭೆ ಸದಸ್ಯ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಹೇಳಿಕೆ:- ಮಳಿಗೆಗೆ ವಿದ್ಯುತ್ ಪೂರೈಕೆ ಇಲ್ಲದಿರುವುದು ಹಾಗೂ ಬಾಗಿಲುಗಳ ವ್ಯವಸ್ಥೆ ಇಲ್ಲದಿರುವುದು ಮತ್ತು ಇನ್ನಿತರ ಸೌಕರ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಸುಮಾರು 39 ಲಕ್ಷ ಖರ್ಚು ಮಾಡಿದರೂ ಯೋಜನಾಬದ್ಧವಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿಲ್ಲ ಎಂಬ ಆರೋಪವೂ ಇದೆ. ಹೀಗಾಗಿ ಕೆಲ ಅಡಚಣೆ ಉಂಟಾಗಿದೆ. ವಾಣಿಜ್ಯ ಸಂಕೀರ್ಣದಲ್ಲಿ 56 ಮಳಿಗೆಗಳಿದ್ದು, ಅವುಗಳಲ್ಲಿ 21 ಮಳಿಗೆಗೆ ಹರಾಜು ಪ್ರಕ್ರಿಯೆ ನಡೆದಿದ್ದು, ಅವು ವ್ಯಾಪಾರಸ್ಥರಿಂದ ಬಳಕೆಯಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಬಿ ಈರಣ್ಣ ತಿಳಿಸಿದರು.