ಪಾಳು ಬಿದ್ದ ಬಹುಮನಿ ಸುಲ್ತಾನರ ಕೋಟೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅನೈತಿಕ ತಾಣ

ಕಲಬುರಗಿ:ಡಿ.26: ಅದು ಇತಿಹಾಸ ಸಾರುವ ಐತಿಹಾಸಿಕ ಕೋಟೆ, ಆ ಭಾಗದ ಪ್ರವಾಸಿ ತಾಣಗಳಲ್ಲಿ. ಆ ಕೋಟೆ ಕೂಡ ಒಂದು. ಆದಾಗ್ಯೂ, ಐತಿಹಾಸಿಕ ಕೋಟೆ ಇದೀಗ ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ದಿನೇ ದಿನೇ ನಶಿಸಿ ಹೋಗುತ್ತಿದೆ. ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿದೆ. ಪ್ರವಾಸಿಗರು ಕೋಟೆಯತ್ತ ಮುಖ ಮಾಡದಂತಹ ಸ್ಥಿತಿ ನಿರ್ಮಾಣಗೊಂಡಿದೆ.
ಬಿಸಿಲೂರು ಕಲಬುರಗಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಐತಿಹಾಸಿಕ ಬೃಹತ್ ಕೋಟೆಗೆ ತನ್ನದೇ ಆದ ಇತಿಹಾಸ ಇದೆ. ಆದಾಗ್ಯೂ, ಈ ಕೋಟೆ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬಿದ್ದ ಪರಿಸ್ಥಿತಿಯಲ್ಲಿ ಗೋಚರಿಸುತ್ತಿದೆ. ಕೋಟೆಯ ಬೃಹತ್ ತಡೆಗೋಡೆಯ ಕಲ್ಲುಗಳು ಕಳಚಿ ಬೀಳುತ್ತಿವೆ. ತಡೆ ಗೋಡೆಯ ಮೇಲೆಲ್ಲ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಪುರಾತನ ಇತಿಹಾಸ ಹೇಳುವ ಈ ಕೋಟೆ ಮೂಲ ಸ್ವರೂಪ ಕಳೆದುಕೊಳ್ಳುತ್ತ ಕಾಲ ಕ್ರಮೇಣ ಪಾಳು ಬೀಳುತ್ತಿದೆ. ಅಲ್ಲದೇ ಕೋಟೆ ಆವರಣ ಪುಂಡ ಪೋಕರಿಗಳ ಹಾವಳಿಯಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ.
ಕೋಟೆ ನಿರ್ವಹಣೆ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ಗಳ ಅನುದಾನ ಬಂದರೂ ಕೋಟೆ ಮಾತ್ರ ನಿರ್ವಹಣೆ ಆಗುತ್ತಿಲ್ಲ. ಬಂದಿರುವ ಅನುದಾನ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೇ ಕೋಟೆ ಅಭಿವೃದ್ಧಿಪಡಿಸಬೇಕು ಎಂದು ಜಿಲ್ಲಾಧಿಕಾರಿ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ.
ಇನ್ನು ದೆಹಲಿಯ ಬಹುಮನಿ ಸುಲ್ತಾನರು ತಮ್ಮ ಸಾಮ್ರಾಜ್ಯವನ್ನು ದೇಶಾದ್ಯಂತ ವಿಸ್ತರಿಸುತ್ತ ಬಂದು, ಕಲಬುರಗಿಯಲ್ಲಿ ವರಂಗಲ್ ಕಾಕತೀಯರ ಜಹಗೀರನಾದ ರಾಜಾ ಗುಲ್ಶಂದ್ ಇದನ್ನು ನಿರ್ಮಿಸಿದ. ಬಳಿಕ ಈ ಕೋಟೆಯನ್ನು ಬಹುಮನಿ ಸುಲ್ತಾನರು 14ನೇ ಶತಮಾನದ 1327ರಲ್ಲಿ ವಶಪಡಿಸಿಕೊಂಡು ಸುಣ್ಣ, ಗಾರೆ ಮತ್ತು ಗ್ರಾನೈಟ್ಸ್‍ನಿಂದ ಅಭಿವೃದ್ಧಿಗೊಳಿಸಿದರು.
ಮೂರು ಕಿ.ಮೀ. ಸುತ್ತಳತೆಯಲ್ಲಿ ಬೃಹತ್ ಕೋಟೆ ನಿರ್ಮಿಸಲಾಗಿದ್ದು, ಶತೃಗಳು ಸರಳವಾಗಿ ಕೋಟೆ ಪ್ರವೇಶ ಮಾಡದಂತೆ ಕೋಟೆ ಸುತ್ತಲೂ ಬೃಹತ್ ಕಂದಕ ನಿರ್ಮಿಸಿದ್ದಾರೆ. ಶತೃಗಳನ್ನು ಸದೆ ಬಡೆಯಲು ಕೋಟೆಯ ಸುತ್ತಲೂ ಬೃಹತ್ ತೋಪುಗಳನ್ನು ಸ್ಥಾಪಿಸಲಾಗಿದೆ. ಕಾಲ ಕ್ರಮೇಣ ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಈ ಕೋಟೆ ಬಂದಿತು. ಕೋಟೆ ಒಳಾಂಗಣದಲ್ಲಿ ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ಸುಂದರವಾದ ಗುಮ್ಮಟ ಒಳಗೊಂಡ ಜಾಮೀಯಾ ಮಸ್ಜಿದ್ ಅನ್ನು 1367ರ ನಂತರ ನಿರ್ಮಿಸಲಾಗಿದೆ.
ಸಾಕಷ್ಟು, ಇತಿಹಾಸ ಸಾರುವ ಈ ಕೋಟೆಯನ್ನು ವೀಕ್ಷಣೆ ಮಾಡಲು ಆಂಧ್ರ, ತೆಲಂಗಾಣ್, ಮಹಾರಾಷ್ಟ್ರ ಸೇರಿದಂತೆ ದೆಹಲಿಯಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ನಗರದ ಶರಣಬಸವೇಶ್ವರ್ ದೇವಸ್ಥಾನ, ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ಮಂದಿರ ಹೀಗೆ ಹಲವು ಪ್ರವಾಸಿ ತಾಣಗಳಲ್ಲಿ ಈ ಕೋಟೆ ಕೂಡ ಪ್ರಮುಖ ಪ್ರವಾಸಿ ತಾಣವಾಗಿದೆ. ಆದಾಗ್ಯೂ, ಕೋಟೆಯ ಈಗಿನ ಅವ್ಯವಸ್ಥೆ ಪ್ರವಾಸಿಗರಿಗೆ ನಿರಾಸೆಯುಂಟು ಮಾಡುತ್ತಿದೆ. ಕೋಟೆ ಮತ್ತು ಪುರಾತನ ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಹೋರಾಟಗಾರರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಪ್ರವಾಸಿಗರ ಅಚ್ಚು ಮೆಚ್ಚಿನ ಐತಿಹಾಸಿಕ ಕೋಟೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಅವನತಿ ಅಂಚಿನತ್ತ ಸಾಗುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಐತಿಹಾಸಿಕ ಕೋಟೆಯನ್ನು ಕನಿಷ್ಠ ಸಂರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕಾಗಿದೆ.