ಪಾಲಿಮೇಡು ಮುಖ್ಯ ರಸ್ತೆ ದುರಸ್ಥಿ ಕಾರ್ಯಕ್ಕೆ ಗ್ರಾಮಸ್ಥರ ಒತ್ತಾಯ

ಹನೂರು: ಜೂ.11: ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಿಮೇಡು ಮುಖ್ಯ ರಸ್ತೆ ಹಾಗೂ ಇಲ್ಲಿಯೇ ಇರುವ ಪದವಿಪೂರ್ವ ಕಾಲೇಜು ಹಾಗೂ ಶಾಲೆ ಬಳಿ ರಸ್ತೆ ತೀವ್ರವಾಗಿ ಹದಗೆಟ್ಟಿರುವುದರಿಂದ ಕೂಡಲೇ ಸಂಬಂಧ ಪಟ್ಟವರು ರಸ್ತೆ ದುರಸ್ಥಿ ಕಾರ್ಯವನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಇಲ್ಲಿನ ಸ್ಥಳಿಯರು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಚಾಮರಾಜನಗರ ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯಿತಿ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಿಮೇಡು ಮುಖ್ಯ ರಸ್ತೆಯು ಬಹಳ ದುರಸ್ತಿಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೂ ಜನಪ್ರತಿನಿಧಿಗಳು ಈ ಬಗ್ಗೆ ಕಣ್ಣೆತ್ತಿಯೂ ನೋಡಿಲ್ಲ. ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯು ಚಿಂತಾಜನಕ ಸ್ಥಿತಿಯನ್ನು ತಲುಪಿದೆ. ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸುವುದು ಬಹಳ ಕಷ್ಟವಾಗಿದೆ.
ಇದರ ಮುಂಭಾಗವೇ ಪದವಿಪೂರ್ವ ಕಾಲೇಜು ಹಾಗೂ ಶಾಲೆ ಇದೆ. ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುವುದು ಅಸಾಧ್ಯವಾಗಿದೆ.
ಇತ್ತೀಚಿಗೆ ನಾಲ್ಕೈದು ಯುವಕರು ಈ ರಸ್ತೆಯಲ್ಲಿ ಜಾರಿಬಿದ್ದು ತೀವ್ರ ಗಾಯಗೊಂಡಿದ್ದಾರೆ.ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲಾ ಆವರಣಕ್ಕೆ ಪ್ರವೇಶಿಸುವಾಗ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಹದಗೆಟ್ಟ ಈ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.