ಪಾಲಿಗಾಗಿ ಜಗಳ : ಬೆಡ್ ಬ್ಲಾಕಿಂಗ್ ಬಹಿರಂಗ

ಬೆಂಗಳೂರು, ಮೇ ೫- ಪಾಲು ಹಂಚಿಕೆಯಲ್ಲಿ ಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಿಜೆಪಿ ಸಂಸದರು, ಶಾಸಕರು ಬಹಿರಂಗಗೊಳಿಸುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಬೆಡ್ ಬ್ಲಾಕಿಂಗ್ ಗಮನಕ್ಕೆ ಬಂದು ಹತ್ತು ದಿನ ಆಯಿತು ಎಂದಿದ್ದೀರಿ. ಇಷ್ಟು ದಿನ ಅಧಿಕಾರಿಗಳ ಮನವೊಲಿಸುತ್ತಿದ್ದೀರಾ ಬೇರೆ ಏನಾದರೂ ವ್ಯವಹಾರದ ಮಾತುಕತೆ ನಡೆದಿತ್ತಾ. ನಿಮ್ಮ ನಿಗೂಢ ಮೌನವನ್ನು ಹೇಗೆ ಅರ್ಥೈಸುವುದು ಎಂದು ಅವರು ಸಂಸದ ತೇಜಸ್ವಿಸೂರ್ಯ , ಶಾಸಕರಾದ ರವಿಸುಬ್ರಹ್ಮಣ್ಯ ಮತ್ತು ಸತೀಶ್ ರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ.
ಕೋವಿಡ್ ನಿರ್ವಹಣೆಯ ಗುಪ್ತ ಕಾರ್ಯಾಚರಣೆ ನಡೆಸಬೇಕಾಗಿರುವುದು ಬಿಬಿಎಂಪಿಯ ಅಧಿಕಾರಿಗಳ ವಿರುದ್ಧವಲ್ಲ. ವಿಧಾನಸೌಧದಲ್ಲಿ ಕೂತಿರುವ ಮುಖ್ಯಮಂತ್ರಿ, ಸಚಿವರು ಮತ್ತು ಬಿಜೆಪಿ ಶಾಸಕರು, ಸಂಸದರ ವಿರುದ್ಧ. ಸಣ್ಣ ಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಿಲಗಳ ರಕ್ಷಣೆಗಾ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕೋವಿಡ್ ಪ್ರಾರಂಭದ ದಿನಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿನ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಹಿರಂಗಗೊಳಿಸಿದ್ದೆ. ಅದರ ಜತೆಗೆ ಈಗ ನೀವು ಹೇಳುತ್ತಿರುವುದನ್ನು ಸೇರಿಸಿ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಎಂದು ಸಿದ್ಧರಾಮಯ್ಯ, ಸಂಸದ ತೇಜಸ್ವಿಸೂರ್ಯ ಅವರನ್ನು ಒತ್ತಾಯಿಸಿದ್ದಾರೆ.
ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದವರೆಗೂ ಎಲ್ಲದರಲ್ಲಿಯೂ ಜಾತಿ, ಧರ್ಮವನ್ನು ಎಳೆದು ತರುವ ನಿಮ್ಮ ಕೊಳಕು ಬುದ್ಧಿಯನ್ನು ಕೊರೊನಾ ರೋಗಕ್ಕೂ ಯಾಕೆ ಎಳೆದು ತರುತ್ತೀರಿ ತೇಸಜ್ವಿಸೂರ್ಯ ಅವರೇ, ಕೊರೊನಾ ವೈರಸ್‌ಗಿಂತಲೂ ಅಪಾಯಕಾರಿ ನಿಮ್ಮ ಮೆದುಳಲ್ಲಿರುವ ಕೋಮು ವೈರಸ್ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
ಯತಾ ರಾಜಾ, ತತಾ ಮಂತ್ರಿ” ಮೈ ಜಿ ಕಾವುಂಗಾ ತುಮ್ ಬಿ ಕಾವೋ ಎನ್ನುವುದೇ ನರೇಂದ್ರಮೋದಿ ಅವರ ನಿಜವಾದ ಘೋಷಣೆ ಅದನ್ನೆಲ್ಲಾ ನೀವು ಮಾಡುತ್ತಿದ್ದೀರೀ. ಪಾಲು ಹಂಚಿಕೆಯಲ್ಲಿಜಗಳವಾದಾಗ ಇಂತಹ ಕಿಡಿಗಳು ಸಿಡಿಯುತ್ತವೆ ಅಷ್ಟೇ ಅಲ್ಲವೆ ಎಂದಿದ್ದಾರೆ.
ಮುಖ್ಯಮಂತ್ರಿಗಳಿಂದ ಕರ್ತವ್ಯಲೋಪ, ಭ್ರಷ್ಟತೆ ನಡೆದಿದ್ದರೆ ಅವರ ವಿರುದ್ಧ ನೇರ ಆರೋಪ ಪಟ್ಟಿ ಸಲ್ಲಿಸಿ ಅವರನ್ನು ಕಿತ್ತು ಹಾಕಿ. ಇದಕ್ಕಾಗಿ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳನ್ನು ಏಕೆ ಬಳಸಿಕೊಳ್ಳುತ್ತೀರಿ. ನಿಮ್ಮ ಆಂತರಿಕ ಕಿತ್ತಾಟಕ್ಕೆ ಕೊರೊನಾವನ್ನು ಏಕೆ ಬಳಸಿಕೊಳ್ಳುತ್ತೀರಿ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಕೇಂದ್ರ ಸರ್ಕಾರ ಏನು ಕಡಿದು ಕಟ್ಟೆ ಹಾಕಿದೆ. ಅದನ್ನೇ ಜನರಿಗೂ ತಿಳಿಸಿ. ರಾಜ್ಯದ ಕೊರೊನಾ ರೋಗಿಗಳಿಗೆ ಬೆಡ್ ಕೊಡಿ, ವೆಂಟಿಲೇಟರ್ ಕೊಡಿ, ಹಾಸಿಗೆ ಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಿಕ್ಷುಕರ ರೀತಿ ಪ್ರಧಾನಿಯನ್ನು ಬೇಡುತ್ತಿದ್ದಾರೆ. ರಾಜ್ಯದ ೨೫ ಬಿಜೆಪಿ ಸಂಸದರು ಯಾವ ಬಿಲ ಸೇರಿದ್ದಾರೆ ಇಲ್ಲಿ ಹುಲಿಯಂತೆ ಕಿರುಚಾಡುವ ಸಂಸದರು ಪ್ರಧಾನಿ ಎದುರು ಇಲಿಗಳಾಗಿ ಬಿಲ ಸೇರುವುದು ಏಕೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಯ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಮತದಾರರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ. ಈಗ ರಾಜ್ಯದಲ್ಲಿ ದೌರ್ಭಾಗ್ಯದ ಬಾಗಿಲು ತೆರದಿದೆ. ಸ್ಮಶಾನದಲ್ಲಿ ಹೆಣಗಳ ಸಾಲು ಬೆಳೆಯುತ್ತಿದೆ. ಇದೇನಾ ಮೋದಿಯವರ ಅಚ್ಚೆ ದಿನ್ ಎಂದು ಸಿದ್ಧರಾಮ್ಯ ಕಿಡಿಕಾರಿದ್ದಾರೆ.