ಪಾಲಿಕೆ ಸಿಬ್ಬಂದಿಗಳ ಮುಂಬಡ್ತಿಯಲ್ಲಿ ಅನ್ಯಾಯ: ಮರು ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಸೆ.21:ಮಹಾನಗರ ಪಾಲಿಕೆಯಲ್ಲಿನ ಸಿಬ್ಬಂದಿಗಳ ಮುಂಬಡ್ತಿಯಲ್ಲಿ ಅನ್ಯಾಯ ಆಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿ ಭಾರತೀಯ ಯುವ ಸೈನ್ಯದ ಕಾರ್ಯಕರ್ತರು ಗುರುವಾರ ಪಾಲಿಕೆಯ ಕಚೇರಿ ಮುಂದೆ ಪ್ರತಿಭಟನಾ ಧರಣಿ ಮಾಡಿದರು.

ಪ್ರತಿಭಟನೆಕಾರರು ನಂತರ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಮಹಾನಗರ ಪಾಲಿಕೆಯಲ್ಲಿ ಸುಮಾರು 1994ರಿಂದ ಒಟ್ಟು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರುಪ್ ಡಿ ಸಿಬ್ಬಂದಿಯವರಿಗೆ ಯಾವುದೇ ಮುಂಬಡ್ತಿಯನ್ನು ನೀಡಿಲ್ಲ ಎಂದು ಆರೋಪಿಸಿದರು.
ಆದಾಗ್ಯೂ, ಕಳೆದ 2014, 2015 ಮತ್ತು 2016ರಲ್ಲಿ ಗ್ರುಪ್ ಡಿ ಹುದ್ದೆಗೆ ನೇಮಕಗೊಂಡಿರುವ 8 ಜನರಿಗೆ ಮುಂಬಡ್ತಿಯನ್ನು ನೀಡಿದ್ದಾರೆ. ಅದಲ್ಲದೇ 1994ರಿಂದ ಪ್ರಸ್ತುತ ಇಲ್ಲಿಯವರೆಗೆ ಕಾರ್ಯನಿರ್ವಹಿಸಿರುವ ಸಿಪಾಯಿಯವರಿಗೆ ಬಡ್ತಿ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಅವರು ದೂರಿದರು.
ದ್ವಿತೀಯ ದರ್ಜೆ ಸಹಾಯಕರಾಗಿರುವ ಜಗನ್ನಾಥ್ ತಂದೆ ರಾಣಪ್ಪ, ಬಸವರಾಜ್ ತಂದೆ ಶರಣಬಸಪ್ಪ, ಬಲರಾಮ್ ತಂದೆ ದತ್ತು, ಕುಮಾರಿ ಸರಸ್ವತಿ ತಂದೆ ಬದಿಗೆಪ್ಪ, ಮೊಹ್ಮದ್ ಅಬ್ದುಲ್ ಮೊಹಸೀನ್ ತಂದೆ ಮೊಹ್ಮದ್ ಅಬ್ದುಲ್ ಖಾಲಿಕೆ, ಶ್ರೀಮತಿ ಲಲಿತಾ ಗಂಡ ಸೂರ್ಯಕಾಂತ್, ಸೋಮಶೇಖರ್ ತಂದೆ ಬಸಯ್ಯ, ಬಸವರಾಜ್ ಓಲೇಕಾರ್, ಬಸವರಾಜ್ ಪಂಚಕಟ್ಟಿ ಅವರು ಅಕ್ರಮವಾಗಿ ಮುಂಬಡ್ತಿಯನ್ನು ಪಡೆದಿದ್ದಾರೆ ಎಂದು ಅವರು ದೂರಿದರು.
ಸದರಿ 8 ಜನರಿಗೆ ಯಾವ ಆಧಾರದ ಮೇಲೆ ಹಾಗೂ ದಾಖಲಾತಿಗಳ ಕುರಿತು ಮಾಹಿತಿ ಕೇಳಿ ಮೂರು ತಿಂಗಳು ಗತಿಸಿದರೂ ಸಹ ಮಾಹಿತಿ ನೀಡದೇ ದಾರಿ ತಪ್ಪಿಸುತ್ತ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಬಡ್ತಿ ನೀಡಿದ್ದು, ಎಲ್ಲ ಮಾಹಿತಿ ಅಲ್ಲಿಯೇ ಲಭ್ಯವಿದೆ ಎಂದು ಹೇಳುತ್ತಾರೆ. ಸುಮಾರು ಮೂರು ತಿಂಗಳಿನಿಂದ ಸರಿಯಾದ ದಾಖಲಾತಿಗಳನ್ನು ಕೊಡದೇ ಅನಾವಶ್ಯಕವಾಗಿ ಕಾಲಹರಣ ಮತ್ತು ವಿಳಂಬ ಮಾಡುತ್ತಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡು, ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಚಿಂಚನಸೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗಣೇಶ್ ಕಟ್ಟಿಮನಿ, ರಾಜಶೇಖರ್ ಹೇರೂರ್, ಬಸವರಾಜ್ ಬೇಲೂರ್, ರೋಮಿಯೋ, ಸದ್ದಾಮ್, ಜಯಶ್ರೀ, ನೀಲಾವತಿ, ಗೌತಮ್ ಹದನೂರ್, ದಿನೇಶ್ ವಗ್ಗನ್, ಅವಿನಾಶ್ ಮುದ್ದಡಗಾ, ಶಿವಕುಮಾರ್ ಶಹಾಬಜಾರ್, ಸವಿತಾ, ರಾಹುಲ್ ಸೂರ್ಯವಂಶಿ, ಭೀಮಾಶಂಕರ್ ಸೂರ್ಯವಂಶಿ, ಶಿವರುದ್ರ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.