ಮಳೆಗಾಲ ಹಿನ್ನೆಲೆ:ಪಾಲಿಕೆ ವ್ಯಾಪ್ತಿಯಲ್ಲಿ ತುರ್ತು ಕಾರ್ಯಕ್ಕೆ ಅಧಿಕಾರಿಗಳ ತುರ್ತು ಸ್ಪಂದನಾ ತಂಡ ರಚನೆ

ಕಲಬುರಗಿ,ಜು.18: ಪ್ರಸ್ತುತ ಮಳೆಗಾಲ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದು, ಭಾರಿ ಮಳೆಯಿಂದ ಮರದ ಟೊಂಗೆಗಳು ಮುರಿದು ಸಂಚಾರಕ್ಕೆ ಅಡಚಣೆ, ವಿದ್ಯುತ್ ಸಂಪರ್ಕ ಕಡಿತ ಮತ್ತು ಸೇವೆಯಲ್ಲಿನ ವ್ಯತ್ಯಯಗಳಂತಹ ಸಾರ್ವಜನಿಕ‌ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ವಲಯ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿ ಮತ್ತು ನೈರ್ಮಲ್ಯ ನಿರೀಕ್ಷಕರನ್ನೊಳಗೊಂಡ 3 ತಂಡಗಳನ್ನು ರಚಿಸಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ವಲಯ-1ರ ಆಯುಕ್ತ ಪ್ರಹ್ಲಾದರಾವ್ ಕುಲಕರ್ಣಿ-9845676627, ವಲಯ-2ರ ಆಯುಕ್ತ ಬಿ.ಟಿ.ನಾಯಕ್-7892890859 ಹಾಗೂ ವಲಯ-3ರ ಆಯುಕ್ತ ಮುಜಾಮಿಲ್ ಆಲಮ್-8123193936 ಇವರ ನೇತೃತ್ವದಲ್ಲಿ ತಂಡ ರಚಿಸಿದ್ದು, ಪ್ರತಿ ವಾರ್ಡ್ ಗಳಿಗೆ ಪ್ರತ್ಯೇಕ ಕಿರಿಯ ಅಭಿಯಂತರರು ಮತ್ತು ನೈರ್ಮಲ್ಯ ನಿರೀಕ್ಷಕರನ್ನು ನೇಮಿಸಲಾಗಿದೆ. ಇದಲ್ಲದೆ ವಲಯದ ವ್ಯಾಪ್ತಿದೊಳಗಿನ ವಾರ್ಡ್ ಗಳ ನಡುವೆ ಸಮನ್ವಯ ಸಾಧಿಸಲು ಪಾಲಿಕೆಯ ಇ.ಇ, ಎ.ಇ.ಇ ಹಾಗೂ ಪರಿಸರ ಅಭಿಯಂತರರು ಹೀಗೆ 16 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಪಾಲಿಕೆಯ ವಲಯವಾರು ವಾರ್ಡ್ ಸಂಖ್ಯೆಗಳ‌ ವಿವರ ಹೀಗಿದೆ;

ವಲಯ-1ರಲ್ಲಿ 33, 36, 42, 43, 45 ರಿಂದ 55. ವಲಯ-2ರಲ್ಲಿ 5 ರಿಂದ 11, 23, 25, 26, 27, 37 ರಿಂದ 41 ಹಾಗೂ 44. ವಲಯ-3ರಲ್ಲಿ 1 ರಿಂದ 4, 12 ರಿಂದ 22, 24 ಹಾಗೂ 28 ರಿಂದ 32.

ಮಳೆಗಾಲ ಮತ್ತು ಪ್ರವಾಹ ಸಂದರ್ಭದಲ್ಲಿನ ತುರ್ತು ಕಾರ್ಯಗಳನ್ನು ವಲಯ ಅತಯಕ್ತರು, ಎ.ಇ.ಇ., ಪರಿಸರ ಅಭಿಯಂತರರು ಹಾಗೂ ವಾಹನ ಶಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಸಮನ್ವಯ ಸಾಧಿಸಿ ಯಾವುದೇ ಲೋಪದೋಷವಿಲ್ಲದೆ, ದೂರುಗಳಿಗೆ ಅವಕಾಶವಿಲ್ಲದೆ ತ್ವರಿತಗತಿಯಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಆದೇಶದಲ್ಲಿ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.