ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಚಿಂತನೆ

ಬೆಂಗಳೂರು, ಮೇ.೩೦- ನಾಡಿನ ಜನರಿಗೆ ನೀಡಿರುವ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲ ಕ್ರೋಢಿಕರಣದತ್ತ ಗಮನ ಹರಿಸಿರುವ ಕಾಂಗ್ರೆಸ್ ಸರ್ಕಾರ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಗಂಭೀರ ಚಿಂತನೆ ನಡೆಸಿದೆ.
ಬೆಂಗಳೂರಿನ ಆಸ್ತಿ ತೆರಿಗೆಯಿಂದ ಬರುವ ಆದಾಯದ ಮೇಲೆ ಕಣ್ಣಿಟ್ಟಿರುವ ಸರ್ಕಾರ ತೆರಿಗೆ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿ ಯೋಜನೆಗಳಿಂದ ಆಗುವ ನಷ್ಟವನ್ನು ತಕ್ಕಮಟ್ಟಿಗೆ ತಗ್ಗಿಸಿಕೊಳ್ಳಲು ಯೋಜನೆ ರೂಪಿಸಿದೆ ಎನ್ನಲಾಗಿದೆ.ಕಳೆದ ೧೨ ವರ್ಷಗಳಿಂದ ಆಸ್ತಿ ತೆರಿಗೆ ಏರಿಕೆ ಅಗಿಲ್ಲ.ಈಗ ಅಸ್ತಿ ತೆರಿಗೆ ಏರಿಕೆ ಮಾಡೋದಕ್ಕೆ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಸತಿ ಕಟ್ಟಡಗಳಿಗೆ ಶೇ.೧೦ ರಿಂದ ೧೫ ತೆರಿಗೆ ಏರಿಕೆ ಸಾಧ್ಯತೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. ೧೫ ರಿಂದ ೨೦ ರಷ್ಟು ತೆರಿಗೆ ಏರಿಕೆ ಮಾಡುವ ಸಾಧ್ಯತೆಗಳಿವೆ.ನಾವು ಈ ಬಾರಿ ತೆರಿಗೆ ಹೆಚ್ಚಳ ಮಾಡಲು ರೂಪುರೇಷೆ ಸಿದ್ದಪಡಿಸಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಾಲಿಕೆಯ ಕಾನೂನು ಹಾಗು ನಿಯಮಗಳ ಪ್ರಕಾರ, ಪ್ರತಿ ೩ ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಮೊತ್ತವನ್ನು ಶೇ. ೨೦ ರಿಂದ ೨೫ ಹೆಚ್ಚಿಸಲು ಅವಕಾಶವಿದೆ. ಆದರೆ ಕಳೆದ ೧೨ ವರ್ಷಗಳಿಂದ ಅಸ್ತಿ ತೆರಿಗೆ ಮೊತ್ತ ಹೆಚ್ಚಳವಾಗಿಲ್ಲ. ಇದರಿಂದಾಗಿ ಬಿಬಿಎಂಪಿಯ ಆಸ್ತಿ ತೆರಿಗೆ ಗುರಿ ೩೫೦೦ – ೪೦೦೦ ಕೋಟಿಗೆ ಮಾತ್ರ ಸೀಮಿತವಾಗಿದೆ.ಆದರೆ ತೆರಿಗೆಯನ್ನು ಕೇವಲ ಶೇ. ೫ರಷ್ಟು ಹೆಚ್ಚಳ ಮಾಡುವುದ ರಿಂದ ಪಾಲಿಕೆಗೆ ಆದಾಯದ ಪ್ರಮಾಣ ಕೂಡ ಹೆಚ್ಚಾಗಲಿದ್ದು, ಇದನ್ನು ಸರ್ಕಾರ ಬಳಸಿಕೊಳ್ಳಲು ನಿರ್ಧರಿಸಿದೆ.ಅದು ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ೪೧೦೦ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪಾಲಿಕೆ ವಸತಿ ಕಟ್ಟಡಗಳಿಗೆ ಶೇ. ೧೦ ರಿಂದ ೧೫ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.೧೫ ರಿಂದ ೨೦ ರಷ್ಟು ತೆರಿಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.