ಪಾಲಿಕೆ ವಿಶೇಷ ಸಭೆ:ನಾಗರಿಕರ ಸಮಸ್ಯೆ ಪರಿಹಾರಕ್ಕೆ ಶಾಸಕ ಅಲ್ಲಮಪ್ರಭು ಸೂಚನೆ

ಕಲಬುರಗಿ,ಮೇ 26: ದಕ್ಷಿಣ ಮತಕ್ಷೇತ್ರದ ನೂತನ ಶಾಸಕ ಅಲ್ಲಮಪ್ರಭು ಪಾಟೀಲ ಅವರ ನೇತೃತ್ವದಲ್ಲಿ ಇಂದು ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡುಗಳ ಕುಂದುಕೊರತೆ ಕುರಿತಂತೆ ಚರ್ಚಿಸಲು ಪಾಲಿಕೆ ಅಧಿಕಾರಿಗಳ ವಿಶೇಷ ಸಭೆ ಜರುಗಿತು.
ದಕ್ಷಿಣ ಮತಕ್ಷೇತ್ರವು 31 ರಿಂದ 55 ವಾರ್ಡು ಒಳಗೊಂಡ ದೊಡ್ಡ ಕ್ಷೇತ್ರವಾಗಿದ್ದು,ಇಲ್ಲಿನ ಜನಸಾಮಾನ್ಯರ ಕುಂದುಕೊರತೆಗಳಿಗೆ ಪರಿಹಾರ ಸಿಗಬೇಕು ಎಂದು ಅಧಿಕಾರಿಗಳನ್ನು ಉದ್ದೇಶಿಸಿ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಮಳೆಗಾಲದಲ್ಲಿ ನಗರದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಲಕ್ಷದಲ್ಲಿರಿಸಿಕೊಂಡು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಶಾಸಕರು ಸೂಚಿಸಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಾಲಿಕೆ ಸಹಾಯವಾಣಿ ಆರಂಭಿಸಬೇಕು.ನಗರದ ಹಸಿರೀಕರಣಕ್ಕೆ ಮುಂದಾಗಬೇಕು. ಲಂಚದ ಹಾವಳಿಗೆ ಕಡಿವಾಣ ಹಾಕಬೇಕು.ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು.ಅರೆಬರೆ ಮಾಡಿದ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.ಬೀದಿದೀಪಗಳ ನಿರ್ವಹಣೆ, ಕಸ ವಿಲೇವಾರಿ,ಒಳಚರಂಡಿಗಳ ನಿರ್ವಹಣೆ ಮೊದಲಾದ ನಾಗರಿಕ ಸಮಸ್ಯೆಗಳ ಬಗ್ಗೆ ತುರ್ತು ಗಮನ ಹರಿಸುವಂತೆ ಶಾಸಕರು ಸೂಚಿಸಿದರು.ಸಭೆಯಲ್ಲಿ ಪಾಲಿ ಆಯುಕ್ತ ಭುವನೇಶ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.