ಪಾಲಿಕೆ-ಬಿಡಿಎ ಅಕ್ರಮ ತನಿಖೆಗೆ ಚಿಂತನೆ

ಬೆಂಗಳೂರು, ಜೂ. ೨೧- ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬಿಡಿಎನಲ್ಲಿ ನಡೆದಿರುವ ಕಾಮಗಾರಿ ಅಕ್ರಮಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ, ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಪೋರ್ಟಲ್‌ನ್ನು ಬಿಡುಗಡೆ ಮಾಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿಗಳನ್ನು ತಡೆ ಹಿಡಿದು ಹಣ ಪಾವತಿಸದಂತೆ ನಾವು ನೀಡಿರುವ ಸೂಚನೆಗೆ ಬಿಜೆಪಿಯವರು ಬಹಳ ಕೂಗಾಡುತ್ತಿದ್ದಾರೆ. ಕೂಗಾಡಲಿ, ಮುಂದೆ ಎಲ್ಲವನ್ನು ಬಿಚ್ಚಿಡುತ್ತೇನೆ ಎಂದರು.
ಈ ಹಿಂದೆ ನಾನು ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ, ಯಾರೂ ಕಾಮಗಾರಿ ಟೆಂಡರ್‌ಗಳನ್ನು ತೆಗೆದುಕೊಳ್ಳಬೇಡಿ. ಬಿಜೆಪಿ ಸರ್ಕಾರದಲ್ಲಿ ಕಳೆದ ಆರು ತಿಂಗಳಲ್ಲಿ ಆಗಿರುವ ಟೆಂಡರ್‌ಗಳನ್ನು ರದ್ದು ಮಾಡುತ್ತೇವೆ. ಹಾಗೆಯೇ ಅಕ್ರಮ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೆ ಎಂದರು.
ಬಿಬಿಎಂಪಿಯಲ್ಲಿ ಏನೇನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜರಾಜೇಶ್ವರಿ ನಗರದಲ್ಲಿ ೧೨೮ ಕೋಟಿ ರೂ. ಕೆಲಸವೇ ಮಾಡದೆ ಬಿಲ್ ಮಾಡಿದ್ದಾರೆ. ಇಂಜಿನಿಯರ್‌ಗಳ ಕತೆ ಏನಾಗಿದೆ ಎಂಬುದು ನಿಮಗೂ ಗೊತ್ತಿದೆ ಎಂದರು.ಬಿಡಿಎನಲ್ಲೂ ಎಸ್‌ಐಟಿ ತನಿಖೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.ಬಿಬಿಎಂಪಿ ಹಾಗೂ ಬಿಡಿಎನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಸ್‌ಐಟಿ ತನಿಖೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದರು.ಬಿಬಿಎಂಪಿಯಲ್ಲಿ ಅಕ್ರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏನಾದರೂ ಇದ್ದರೆ ಬಿಜೆಪಿಯವರು ಲೋಕಾಯುಕ್ತಕ್ಕೆ ಹೋಗಿ ದೂರು ಕೊಡಲಿ ಎಂದು ಸವಾಲು ಹಾಕಿದರು.ಬಿಜೆಪಿ ಅವಧಿಯಲ್ಲಿ ಏನೆಲ್ಲಾ ಆಗಿದೆ ಎಂಬುದು ನಮಗೂ ಗೊತ್ತಿದೆ. ತನಿಖೆ ಮಾಡಿಸಿ ಎಲ್ಲವನ್ನು ಬಿಚ್ಚಿಡುತ್ತೇನೆ. ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಭೇಟಿಗೆ ಸಮಯ ಕೇಳಿದ್ದೆ ಅವರು ಬ್ಯುಸಿ, ಸಮಯ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ಈಗ ಏನೆಲ್ಲಾ ಮಾತನಾಡುತ್ತಿದ್ದಾರೆ ಗೊತ್ತಿದೆ. ಅಕ್ರಮಗಳೆಲ್ಲಾ ಹೊರಗೆ ಬರುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.
ತಡೆಹಿಡಿದಿರುವ ಕಾಮಗಾರಿಗಳ ಬಿಲ್‌ನ್ನು ಯಾವಾಗ ಪಾವತಿಸುವಿರಿ ಎಂಬ ಪ್ರಶ್ನೆಗೆ, ಕಾಮಗಾರಿಗಳ ಬಗ್ಗೆ ನನಗೆ ತೃಪ್ತಿಯಾಗಬೇಕು. ತನಿಖಾ ತಂಡವನ್ನು ರಚಿಸಿ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಎಲ್ಲವೂ ಸರಿ ಇದೆ ಎಂದಾಗ ಹಣ ಪಾವತಿಸಲಾಗುತ್ತದೆ. ಅಲ್ಲಿಯವರೆಗೂ ತಡೆಹಿಡಿರುವ ಕಾಮಗಾರಿಗಳಿಗೆ ಹಣ ಪಾವತಿಸಲ್ಲ. ಕಾಮಗಾರಿಗಳ ಗುಣಮಟ್ಟ ತೃಪ್ತಿಯಾಗದ ಹೊರತು ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಆರಂಭಿಸಲು ಅವಕಾಶ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.