ಬಜೆಟ್ ಗಾತ್ರ ೧೧,೧೭೫ ಕೋಟಿ
ಬೆಂಗಳೂರು, ಮಾ.೨-ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ೨೦೨೩-೨೪ ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದು, ಮತದಾರರ ಓಲೈಸಲು ಭರಪೂರ ಕೊಡುಗೆ ನೀಡಲಾಗಿದೆ. ೨೦೨೩-೨೪ನೇ ಸಾಲಿನ ಬರೋಬ್ಬರಿ ೧೧ ಸಾವಿರದ ೧೫೭ ಕೋಟಿ ಗಾತ್ರದ ಬಜೆಟ್ ಅನ್ನು ಬಿಬಿಎಂಪಿ ಅಧಿಕಾರಿಗಳು ಮಂಡನೆ ಮಾಡಿದ್ದು, ಇಂದಿರಾ ಕ್ಯಾಂಟೀನ್, ತ್ಯಾಜ್ಯ ನಿರ್ವಹಣೆ ಕೆರೆ ಸಂರಕ್ಷಣೆ ಶಿಕ್ಷಣ, ಆರೋಗ್ಯ, ಆಡಳಿತ, ಮೂಲಸೌಕರ್ಯಗಳು ಸೇರಿದಂತೆ ಇನ್ನಿತರೆ ವಿಭಾಗಗಳಿಗೆ ಅನುದಾನ ನೀಡುವ ಮೂಲಕ ಜೀವ ತುಂಬಿದ್ದಾರೆ. ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ ಹೆಸರಲ್ಲಿ ಸೊಸೈಟಿ ಸ್ಥಾಪಿಸಲು ಪ್ರಸ್ತಾವನೆ ಮಂಡಿಸಲಾಗಿದೆ.ನಗರದಲ್ಲಿಂದು ಪುರಭವನ ಸಭಾಂಗಣದಲ್ಲಿ ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಪ್ರಸ್ತುತ ಸಾಲಿನ ಬಜೆಟ್ ಮಂಡಿಸಿದರು.ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗಳನ್ನು ಉಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಈ ಬಾರಿಯ ಆಯವ್ಯಯದಲ್ಲಿ ೫೦ ಕೋಟಿ ರೂ. ಮೀಸಲಿಡಲಾಗಿದೆ. ೧,೪೧೦ ಕೋಟಿ ವೆಚ್ಚದಲ್ಲಿ ೧೫೦ ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್, ವಾರ್ಡ್‌ನ ನಿರ್ವಹಣೆ ಕೆಲಸಗಳಿಗಾಗಿ ಪ್ರತಿ ವಾರ್ಡ್‌ಗೆ ೭೫ ಲಕ್ಷದಂತೆ ಒಟ್ಟಾರೆ ೧೮೨.೨೫ ಕೋಟಿ ರೂಪಾಯಿ ನೀಡಲಾಗಿದೆ. ೭೫ ಜಂಕ್ಷನ್‌ಗಳ ಅಭಿವೃದ್ಧಿಗೆ ೧೫೦ ಕೋಟಿ ರೂ., ಬೀದಿ ದೀಪಗಳ ನಿರ್ವಹಣೆಗಾಗಿ ೩೮ ಕೋಟಿ, ಕೆರೆಗಳ ನಿರ್ವಹಣೆಗಾಗಿ ೩೫ ಕೋಟಿ, ಭೂಸ್ವಾಧೀನ ಪ್ರಕ್ರಿಯೆಗಾಗಿ ೧೦೦ ಕೋಟಿ ರೂ., ಖಾಲಿ ಜಾಗ ಸಂರಕ್ಷಣೆಗಾಗಿ ೪೦ ಕೋಟಿ, ವಿವಿದುದ್ದೇಶ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳಿಗೆ ೨೫ ಕೋಟಿ ರೂ., ಹೊಸ ಪಾರ್ಕ್‌ಗಳ ಪ್ರಗತಿಗೆ ೧೫ ಕೋಟಿ ರೂ. ಹೊಸ ಚಿತಗಾರ ನಿರ್ಮಾಣಕ್ಕಾಗಿ ೩೦ ಕೋಟಿ, ಪ್ರಾಣಿಗಳ ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ೫, ಕೆರೆಗಳ ಅಭಿವೃದ್ಧಿಗಾಗಿ ೫೦ ಕೋಟಿ ರೂ. ಬಿಬಿಎಂಪಿ ನೌಕರರು, ಸಿಬ್ಬಂದಿಗಳಿಗೆ ವರ್ಷವೂ ‘ನಾಡಪ್ರಭು ಕೆಂಪೇಗೌಡ ಆವಿಷ್ಕಾರ’ ಪ್ರಶಸ್ತಿ ಹಾಗೂ ‘ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ’ ಸ್ಥಾಪಿಸಿ ೧೦ ಕೋಟಿ ರೂ. ಅನುದಾನ ಒದಗಿಸಲಾಗಿದೆ.ನೌಕರರಿಗೆ ಬಂಪರ್: ಬಿಬಿಎಂಪಿ ನೌಕರರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಘೋಷಣೆಗಳನ್ನು ಮಾಡಲಾಗಿದ್ದು, ಈ ಪೈಕಿ ಪಾಲಿಕೆಯ ಆಸ್ತಿ ಸಂರಕ್ಷಣೆಗೆ ದಾಖಲೆ ಶೇಖರಣೆ, ಚೈನ್-ಲಿಂಕ್ ಬೇಲಿ ಹಾಕುವಿಕೆ ಹಾಗೂ ನಾಮಫಲಕ ಅಳವಡಿಕೆಗೆ ೪೦ ಕೋಟಿ ರೂ. ಮೀಸಲಿಡಲಾಗಿದೆ. ಕಾನೂನು ಮತ್ತು ನಿಯಮಾನುಸಾರದ ಪಾರದರ್ಶಕ ಆಡಳಿತಕ್ಕೆ ಅನುವಾಗಲು ಎಲ್ಲಾ ವಿಷಯಗಳಲ್ಲಿಯೂ ಕೈಪಿಡಿ ರಚನೆ, ಮಾಹಿತಿ ತಂತ್ರಜ್ಞಾನ ಅಳವಡಿಕೆ ಹಾಗೂ ಇಆಫೀಸ್‌ಗೆ ಒತ್ತು ಸಹ ನೀಡಲಾಗಿದೆ.ಈ ವರ್ಷದಲ್ಲಿ ಪಾಲಿಕೆಯ ಸಿಬ್ಬಂದಿಗೆ ಹಲವು ತರಬೇತಿ ಆಯೋಜನೆ ಮಾಡಿದ್ದು, ೨೦೨೩-೨೪ನೇ ವರ್ಷದಲ್ಲಿ ಪಾಲಿಕೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಕನಿಷ್ಠ ೫ ದಿನಗಳ ವಾರ್ಷಿಕ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಹೊಸ ವ್ಯವಸ್ಥೆ, ತಂತ್ರಾಂಶ, ವಿನ್ಯಾಸ, ಸಮಸ್ಯೆ ನಿವಾರಣೆ ಸೂತ್ರ ಅಥವಾ ಬೇರಾವುದೇ ಆವಿಷ್ಕಾರವನ್ನು ಉತ್ತೇಜಿಸಲು ಹಾಗೂ ಪಾಲಿಕೆಯ ಅಧಿಕಾರಿ-ಸಿಬ್ಬಂದಿಯಲ್ಲಿ ಗುಣಾತ್ಮಕ ಪರಿವರ್ತನೆಯ ಮನೋಭಾವ ಬೆಳೆಸುವ ಸದುದ್ದೇಶದಿಂದ ಪ್ರತಿ ವರ್ಷವೂ ‘ನಾಡಪ್ರಭು ಕೆಂಪೇಗೌಡ ಆವಿಷ್ಕಾರ’ ಪ್ರಶಸ್ತಿಯನ್ನು ನೀಡಲಾಗುವುದು. ಇದಕ್ಕೆ ೨ ಲಕ್ಷ ರೂ ಮೊತ್ತದ ಪುರಸ್ಕಾರಕ್ಕೆ ಎಲ್ಲ ಅಧಿಕಾರಿ, ಸಿಬಂದಿ ಅರ್ಹರಾಗಿದ್ದಾರೆ.ಅದೇ ರೀತಿ, ಪಾಲಿಕೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ನಿವೃತ್ತಿಯ ನಂತರ ಯಾವುದೇ ಆರೋಗ್ಯ ರಕ್ಷಣೆ ಅಥವಾ ಆರೋಗ್ಯ ವಿಮೆಯ ಸೌಲಭ್ಯವಿಲ್ಲ.ಹೀಗಾಗಿ, ‘ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ’ ಯ ಹೆಸರಿನಲ್ಲಿ ಸೊಸೈಟಿ ಸ್ಥಾಪನೆ ಮಾಡಲಾಗಿದ್ದು, ೨೦೨೩-೨೪ನೇ ಆಯವ್ಯಯದಲ್ಲಿ ಸದರಿ ಕಾರ್ಪಸ್ ಫಂಡ್‌ಗೆ ಕೊಡುಗೆಯಾಗಿ ೧೦ ಕೋಟಿ ರೂ ಮೀಸಲಿರಿಸಿದೆ.೨೪೩ ವಾರ್ಡಿಗಳಲ್ಲಿಯೂ ಪಾಲಿಕೆಯ ಕಂದಾಯ ವಿಭಾಗ, ಇಂಜಿನಿಯರಿಂಗ್ ವಿಭಾಗ ಹಾಗೂ ಆರೋಗ್ಯ ವಿಭಾಗದ ಕಾರ್ಯಗಳನ್ನು ವಾರ್ಡ್ ಮಟ್ಟದಲ್ಲಿಯೇ ನಿರ್ವಹಿಸಲು ಸೂಕ್ತ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಪ್ರಕಟಿಸಲಾಗಿದೆ.೭೦೦ ಕೋಟಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆ ಸಂಸ್ಥೆಗೆ ೭೦೦ ಕೋಟಿ ರೂ. ಸಹಾಯನುದಾನ ನೀಡಲಾಗಿದೆ. ಬೀದಿ ನಾಯಿಗಳ ನಿರ್ವಹಣೆಗೆ ೨೦ ಕೋಟಿ, ಹೊಸ ವಲಯಗಳ ಉದ್ಯಾನವನಗಳಿಗೆ ೩೫ ಕೋಟಿ, ಹಳೆ ವಲಯಗಳ ಉದ್ಯಾನವನಗಳಿಗೆ ೪೫ ಕೋಟಿ, ಆರೋಗ್ಯ ವ್ಯವಸ್ಥೆಗಾಗಿ ೨ ಕೋಟಿ, ಮರಗಳ ಗಣತಿಗಾಗಿ ೪ ಕೋಟಿ, ಸಸಿಗಳ ಬೆಳೆಸುವಿಕೆ ಮತ್ತು ನಿರ್ವಹಣೆಗಾಗಿ ೭.೫ ಕೋಟಿ, ಟ್ರೀಕೋನಾಪಿ ನಿರ್ವಹಣೆಗಾಗಿ ೧೪ ಕೋಟಿ, ಹೈಟೆಕ್ ನರ್ಸರಿಗಳಿಗಾಗಿ ೮ ಕೋಟಿಗಳು, ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ ೮೦ ಕೋಟಿ, ಬೃಹತ್ ಮಳೆ ನೀರುಗಾಲುವೆಗಳ ಅಭಿವೃದ್ಧಿಗೆ ೪೫ ಕೋಟಿ, ೯ ಮೇಲು ಸೇತುವೆಗಳ ಕಾಮಗಾರಿಗಳಿಗೆ ೧೪೫ ಕೋಟಿ ಅನುದಾನ ಒದಗಿಸಲಾಗಿದೆ.

ಜನಪ್ರತಿನಿಧಿ ಅನುದಾನ ಎಷ್ಟು?
- ಬೆಂಗಳೂರು ನಗರ ಉಸ್ತುವಾರಿ ಸಚಿವ ೨೫೦ ಕೋಟಿ
- ಬಿಬಿಎಂಪಿ ಮೇಯರ್ ೧೦೦ ಕೋಟಿ
- ಬಿಬಿಎಂಪಿ ಮುಖ್ಯ ಆಯುಕ್ತ ೫೦ ಕೋಟಿ
ಬೆರಳೆಣಿಕೆ ಮಂದಿ ಮಾತ್ರ ಕೌನ್ಸಿಲ್ ಸಭೆಯಲ್ಲಿ ಭಾಗಿ
ಸತತ ಮೂರು ವರ್ಷಗಳಿಂದ ಬಿಬಿಎಂಪಿ ಅಧಿಕಾರಿಗಳೇ ಬಜೆಟ್ ಮಾಡುತ್ತಿರುವುದರಿಂದ ಬೆರಳೆಣಿಕೆ ಮಂದಿ ಮಾತ್ರ ಕೇಂದ್ರ ಕಚೇರಿಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.ಪುರಭವನ ಸಭಾಂಗಣದಲ್ಲಿ ಕೆಲ ಹಿರಿಯ ಅಧಿಕಾರಿಗಳು ಮಾತ್ರ ಬಜೆಟ್ ಮಂಡನೆ ವೇಳೆ ಹಾಜರಿದ್ದರು. ಬಜೆಟ್ ಮಂಡನೆಯನ್ನು ಸಿಸ್ಕೊ ಜಾಬರ್ ತಂತ್ರಾಂಶ ಬಳಸಿ ವಿಡಿಯೊ ಕಾನ್ಫರೆನ್ಸ್‌ಗೆ ಏರ್ಪಾಟು ಮಾಡಿಲಾಯಿತು.
ಎಷ್ಟು ಹಂಚಿಕೆ?
ಈ ಬಜೆಟ್‌ನಲ್ಲಿ ಸಾರ್ವಜನಿಕ ಕಾಮಗಾರಿಗಳಿಗೆ ಬರೋಬ್ಬರಿ ೭೧೦೩.೫೩ ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ೧೬೪೩.೭೨ ಕೋಟಿ ರೂ., ಆರೋಗ್ಯ ವೈದ್ಯಕೀಯಕ್ಕೆ ೧೦೩.೩೨, ತೋಟಗಾರಿಕೆ ೧೨೯.೮೫, ಆಡಳಿತ ವೆಚ್ಚಗಳಿಗೆ ೬೦೨, ಕಂದಾಯ ೫೨೪ ಕೋಟಿ ಸೇರಿದಂತೆ ಒಟ್ಟಾರೆ ೧೧ ಸಾವಿರದ ೧೫೭ ಕೋಟಿಗಳ ಗಾತ್ರದ ಬಜೆಟ್ ಮಂಡಿಸಲಾಗಿದೆ.
೩೪೫ ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಾಣ
೧೧೦ ಹಳ್ಳಿಗಳ ವಿಶೇಷ ಅಭಿವೃದ್ಧಿ ಕಾಮಗಾರಿಗಳಿಗೆ ೬ ಕೋಟಿ
ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ವಸತಿ ನಿಲಯಗಳಿಗಾಗಿ ೨೪ ಕೋಟಿ
ಒಂಟಿ ಮನೆ ನಿರ್ಮಾಣಕ್ಕಾಗಿ ೧೦೦ ಕೋಟಿ
*ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಗಾಗಿ ೨೫ ಕೋಟಿ
- ಹೊಲಿಗೆ ಯಂತ್ರ ವಿತರಣೆಗಾಗಿ ೯ ಕೋಟಿ
- ವೃದ್ದಾಶ್ರಮಗಳಿಗಾಗಿ ೧೬ ಕೋಟಿ,
- ವಿದ್ಯಾರ್ಥಿ ವೇತನ ನೀಡಲು ೫ ಕೋಟಿ
- ೧೫ನೆ ಹಣಕಾಸು ಯೋಜನೆಯಡಿ ಕಾಮಗಾರಿಗಳಿಗೆ ೪೬೧ ಕೋಟಿ
- ಉದ್ಯಾನವನಗಳ ನಿರ್ವಹಣೆಗಾಗಿ ೮೦ ಕೋಟಿ
- ಹೆಚ್ಚುವರಿ ವಿದ್ಯುತ್ ಫಿಟ್ಟಿಂಗ್ ಗಳಿಗಾಗಿ ಒಟ್ಟು ೧೭.೨೫ ಕೋಟಿ
- ದಾಸರಹಳ್ಳಿ ಬಳಿ ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ೫ ಕೋಟಿ