ಪಾಲಿಕೆ ಕಾಮಗಾರಿ ವೇಳೆ ಕೇಬಲ್ ಹಾನಿ ಚೆಸ್ಕಾಂ ಹೊಣೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.20:- ಅವೈಜ್ಞಾನಿಕ ಕೇಬಲ್ ಗಳಿಗೆ ಪಾಲಿಕೆ ಕಾಮಗಾರಿ ವೇಳೆ ಹಾನಿಯಾದರೆ ಅದನ್ನು ಪಾಲಿಕೆ ಭರಿಸುವುದಿಲ್ಲ. ಅದಕ್ಕೆ ಚೆಸ್ಕಾಂ ಅಧಿಕಾರಿಗಳೇ ಹೊಣೆಯಾಗಬೇಕೆಂದು ಮಹಾಪೌರ ಶಿವಕುಮಾರ್ ತಾಕೀತು ಮಾಡಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಚೆಸ್ಕಾಂ ಅಧಿಕಾರಿಗಳೊಂದಿಗೆ ಅವೈಜ್ಞಾನಿಕ ಕೇಬಲ್ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಾಮಗಾರಿಗಳಿಗೆ ಚೆಸ್ಕಾಂ ಕೇಬಲ್ ಗಳು ಅಡ್ಡ ಬರುತ್ತಿವೆ. ಕೇಬಲ್ ಎಲ್ಲಿದೆ ಎಂಬ ಮಾಹಿತಿಯೂ ಸ್ಥಳೀಯ ಇಂಜಿನಿಯರ್ ಗೆ ಲಭ್ಯ ಇಲ್ಲದಿರುವುದು ನೋಡುತ್ತಿದ್ದೇವೆ. ಕನಿಷ್ಠ ಒಂದು ಮೀಟರ್ ಕೆಳಗೆ ಸೀಮೆಂಟ್ ಪೈಪ್ ಲೈನ್ ಒಳಗೆ ಇರಬೇಕೆಂಬ ನಿಯಮವಿದೆ. ಅದಾವುದು ಚೆಸ್ಕಾಂ ಇಲಾಖೆ ಪಾಲನೆ ಮಾಡಿಲ್ಲ. ಸಂಪೂರ್ಣ ಅವೈಜ್ಞಾನಿಕ ಕೇಬಲ್ ಅಳವಡಿಕೆಯಿಂದ ಪಾಲಿಕೆ ಕಾಮಗಾರಿಗೆ ಅಡಚಣೆ ಉಂಟಾಗಿರುವುದು ಸರಿ ಪಡಿಸಲು ಕ್ರಮವಹಿಸಬೇಕಿದೆ. ಟೆಲಿಕಾಂ ಕೇಬಲ್ ಗಳು ಸಹ ಇಷ್ಟ ಬಂದಂತೆ ಎಳೆಯುವ ಮೂಲಕ ನಗರದ ಸೌಂದರ್ಯ ಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ರಸ್ತೆಗೆ ಅಡ್ಡಲಾಗಿ ಕೇಬಲ್ ಸಿಕ್ಕಿ ಅಪಘಾತ ಆಗುವ ಸಂಭವವು ಇರುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ ಎಂದರು.
ಮಾತ್ರವಲ್ಲದೆ, ನಿಯಮದ ಪ್ರಕಾರ ಕೇಬಲ್ ಹಾಕುವ ಕಾರ್ಯ ಮಾಡದಿರುವುದೇ ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಪಾಲಿಕೆ ತುರ್ತು ಕಾಮಗಾರಿ ವೇಳೆ ಚೆಸ್ಕಾಂ ಕೇಬಲ್ ಗಳಿಗೆ ಹಾನಿಯಾದರೆ ಅದನ್ನು ಪಾಲಿಕೆ ಅಥವಾ ಗುತ್ತಿಗೆದಾರರು ಭರಿಸುವುದಿಲ್ಲ. ಬದಲಿಗೆ ಚೆಸ್ಕಾಂ ಹೊಣೆ ಹೊರಬೇಕು. ಶೀಘ್ರ ಕೇಬಲ್ ಅಳವಡಿಕೆಯ ನೀಲನಕ್ಷೆಯನ್ನು ವಲಯವಾರು ಕೊಡುವ ಕೆಲಸ ಮಾಡಬೇಕು. ಕಾಮಗಾರಿ ಸ್ಥಳದ ಮಾಹಿತಿ ತಿಳಿಸಿದೊಡನೆ ನಿಮ್ಮ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೇಬಲ್ ಇರುವ ಜಾಗ ಖಾತರಿ ಪಡಿಸಬೇಕೆಂದು ಹೇಳಿದರು.
ಪಾಲಿಕೆ ಸದಸ್ಯರು ಮಾತನಾಡಿ ಅಪಾಯಕಾರಿ ಕೇಬಲ್ ಹಾಕುವುದು ಬೇಡ. ಎಡಿಪಿ ಪೈಪ್ ಅಳವಡಿಸಿ. ರಸ್ತೆಯಲ್ಲಿ ಟ್ರಾನ್ಸ್ ಫಾರ್ ಕೂರಿಸಿದ್ದು, ಇದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗಿದೆ. ಓವರ್ ಲೈನ್ ಕಾಣಬಾರದು ಎಂಬ ಕಾರಣಕ್ಕೆ ಯುಜಿ ಕೇಬಲ್ ಮಾಡಿದ್ದೇವೆ. ಆದರೆ, ಇಂದಿಗೂ ಅನೇಕ ಕಡೆ ಲೈನ್ ಗಳು ಕಾಣಿಸುತ್ತಾ ನಗರದ ಸೌಂದರ್ಯ ಹಾಳು ಮಾಡಿವೆ ಎಂದು ದೂರಿದರು.
ಪಾಲಿಕೆಯಿಂದ ಒಳಚರಂಡಿ, ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸುವಾಗ ರಸ್ತೆಯಲ್ಲಿ ಸೆಸ್ಕ್ ಅಳವಡಿಸಿರುವ ಯುಜಿ ಕೇಬಲ್ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಇರುವುದರಿಂದ ಕಾಮಗಾರಿ ನಡೆಸಲು ತೊಡಕಾಗುತ್ತಿದೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ಇರುವುದಿಲ್ಲ. ಏನಾದರೂ ಅನಾಹುತವಾದರೆ ಅದನ್ನು ಪಾಲಿಕೆಯೇ ಜವಬ್ದಾರಿ ಎಂದು ಕೆಲಸ ಮಾಡಿಸಿರುವ ಗುತ್ತಿಗೆದಾರರ ಮೇಲೆ ಹೊರಿಸಲಾಗುತ್ತಿದೆ. ಅಲ್ಲದೇ ಕಾಮಗಾರಿ ವಿಳಂಬಕ್ಕೆ ಕೂಡ ಕಾರಣವಾಗುತ್ತಿದೆ. ಜತೆಗೆ ಅವೈಜ್ಞಾನಿಕವಾಗಿ ಕೇಬಲ್ ಅಳವಡಿಕೆ ಮಾಡಲಾಗಿದೆ ಎಂದು ಮೇಯರ್ ಶಿವಕುಮಾರ್ ಹೇಳಿದರು.
ಮೇಯರ್ ಅವರ ಮಾತಿಗೆ ಸದಸ್ಯರಾದ ರಮೇಶ್, ಕೆ.ವಿ.ಶ್ರೀಧರ್, ಅಯೂಬ್ ಖಾನ್, ಬಿ.ವಿ.ಮಂಜುನಾಥ್, ಶಾಂತಕುಮಾರಿ ಕೂಡ ದನಿಗೂಡಿಸಿದರು.
ನಗರದಲ್ಲಿ ಹಾದು ಹೋಗಿರುವ ಯುಜಿ ಕೇಬಲ್ ಅನ್ನು ಜಿಪಿಎಸ್ ಮೂಲಕ ಗುರುತಿಸುವ ತಂತ್ರಜ್ಞಾವನನ್ನು ಬಳಸಿಕೊಂಡರೆ ಸೆಸ್ಕ್ ಮತ್ತು ಪಾಲಿಕೆಗೆ ಅನುಕೂಲವಾಗಲಿದೆ ಎಂದು ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಸಲಹೆ ನೀಡಿದರು.
ಜತೆಗೆ ಪಾಲಿಕೆ ಸದಸ್ಯೆ ಶಾಂತ ಕುಮಾರಿ ಅವರು, ಯುಜಿ ಕೇಬಲ್ ಪತ್ತೆಯ ಸ್ಕ್ಯಾನರ್‍ಗಳನ್ನು ಸೆಸ್ಕ್‍ನಿಂದ ಪಾಲಿಕೆಗೆ ನೀಡಿದರೆ ಕೆಲಸ ನಡೆಸಲು ಅನುಕೂಲವಾಗಲಿದೆ ಎಂದರು.
ನಗರದಲ್ಲಿ ಪುಟ್ಪಾತ್, ಚರಂಡಿ ಮತ್ತು ರಸ್ತೆ ಮಧ್ಯೆ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ಗುರುತಿಸಿ ಅವುಗಳನ್ನು ತುರ್ತಾಗಿ ತೆರವುಗೊಳಿಸಲು ನಿರ್ದೇಶನ ನೀಡಲಾಯಿತು. ಸಭೆಯಲ್ಲಿ ಉಪಮೇಯರ್ ರೂಪ, ಮಾಜಿ ಮೇಯರ್‍ಗಳಾದ ಅಯೂಬ್ ಖಾನ್,ಪುಷ್ಪ ಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ರಮೇಶ್, ಕೆ.ವಿ.ಶ್ರೀಧರ್, ಪ್ರೇಮಾ ಶಂಕರೇಗೌಡ, ಲಕ್ಷ್ಮೀ ಶಿವಣ್ಣ, ಬಿ.ವಿ.ಮಂಜುನಾಥ್ ಶಾಂತಕುಮಾರ್, ಸುಬ್ಪಯ್ಯ, ಸತ್ಯರಾಜು, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಒಳಚರಂಡಿ ವಿಭಾಗದ ಇಇ ಸಿಂಧು, ಸೆಸ್ಕ್ ಎಂಡಿ ಶ್ರೀಧರ್ ಮತ್ತು ಅಧಿಕಾರಿಗಳು ಇದ್ದರು.