
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧೦- ಬಿಬಿಎಂಪಿಯ ಕಾಮಗಾರಿ ಬಿಲ್‌ಗಳಿಗೆ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪ ನಿರಾಧಾರ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳ ಬಿಲ್‌ಗಳನ್ನು ಇನ್ನೂ ಕೊಟ್ಟೇ ಇಲ್ಲ. ಆಗಲೇ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗೆ ಸಮಿತಿ ರಚನೆಯಾಗಿದೆ. ಸಮಿತಿಯ ವರದಿ ಬಂದ ಮೇಲೆ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುತ್ತದೆ ಎಂದರು.
ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಾನು ಕೂಡಾ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಬೇಕು ಎಂದು ಹೇಳಿದ್ದೇನೆ. ಕಾಮಗಾರಿಗಳು ಮುಗಿದಿವೆಯೇ, ಗುಣಮಟ್ಟದಿಂದ ಕೂಡಿವೆಯೋ ಎಂಬೆಲ್ಲಾ ಬಗ್ಗೆ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ಸಮಿತಿ ಮಾಡಿದ್ದೇವೆ. ಸಮಿತಿ ವರದಿ ಬಂದ ನಂತರ ಗುತ್ತಿಗೆದಾರರಿಗೆ ಹಣ ನೀಡಲಾಗುತ್ತದೆ. ಹಣ ನೀಡದೇ ಇರುವಾಗಲೇ ಕಮಿಷನ್ ಆರೋಪ ಮಾಡುವುದು ಎಷ್ಟು ಸರಿ ಎಂದು ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.