ಪಾಲಿಕೆ ಆರ್‌ಓಗಳಿಗೆ ನಡುಕ

ಬೆಂಗಳೂರು,ನ.೨೨- ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣದ ತನಿಖೆಯನ್ನು ಮತ್ತೊಷ್ಟು ಬಿರುಸುಗೊಳಿಸಿರುವ ಹಲಸೂರು ಗೇಟ್ ಪೋಲಿಸರು ಬಿಬಿಎಂಪಿಯ ೧೫ ಮಂದಿ ಆರ್‌ಒಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಇದರಿಂದಾಗಿ ಆರ್‌ಓಗಳಿಗೆ ನಡುಕ ಉಂಟಾಗಿದೆ.ನಿನ್ನೆ ಚಿಲುಮೆ ಸಂಸ್ಥೆ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಿದ ಇಬ್ಬರು ಕಂದಾಯ ಅಧಿಕಾರಿ ಹಾಗೂ ಒಬ್ಬರು ಉಪ ಕಂದಾಯ ಅಧಿಕಾರಿ ಮೂವರನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಅಮಾನತು ಮಾಡಿರುವ ಬೆನ್ನಲ್ಲೇ ಪೋಲಿಸರು ೧೫ ಮಂದಿ ಆರ್‌ಒಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.ಮತದಾರರ ಪಟ್ಟಿ ಪರಿಷ್ಕರಣೆಯ ಅಕ್ರಮ ಆರೋಪ ಪ್ರಕರಣದಲ್ಲಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದ ವಿಚಾರ ತಿಳಿದಿದ್ದ ಬಿಬಿಎಂಪಿ ಆರ್‌ಒಗಳಿಗೆ ಹಲಸೂರು ಗೇಟ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದರಿಂದಾಗಿ ಆರ್‌ಒಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.ಪೊಲೀಸರು ಬಿಬಿಎಂಪಿಯ ೧೫ ಆರ್ ಒಗಳಿಗೆ ನೋಟಿಸ್ ನೀಡಿದ್ದು, ಆರ್ ಒಗಳು ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದರ ದಾಖಲೆಗಳು ಲಭ್ಯವಾಗಿದ್ದು, ಹೀಗಾಗಿ ಹಂತ ಹಂತವಾಗಿ ಆರ್ ಒ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಡಿಜಿಟಲ್ ಸಮೀಕ್ಷಾ ಆಪ್:
ಈ ನಡುವೆ ಬಂಧಿತ ಆರೋಪಿ ರವಿಕುಮಾರ್, ಡಿಜಿಟಲ್ ಸಮೀಕ್ಷಾ ಆಪ್ ಮುಖಾಂತರ ಬಿಬಿಎಂಪಿ ವ್ಯಾಪ್ತಿಯ ಮತ ಕ್ಷೇತ್ರಗಳು ಮಾತ್ರವಲ್ಲದೆ, ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ.
ಕ್ಷೇತ್ರದ ಒಟ್ಟು ಜನಸಂಖ್ಯೆ, ಮಹಿಳೆಯರ ಸಂಖ್ಯೆ, ಪುರುಷರ ಸಂಖ್ಯೆ, ಜಾತಿವಾರು ಮತದಾರರ ಸಂಖ್ಯೆ, ಯುವ ಮತದಾರರ ಸಂಖ್ಯೆ, ಮತದಾನದ ಗುರುತಿನ ಚೀಟಿ ಇಲ್ಲದವರ ಮಾಹಿತಿ, ಗುರುತಿನ ಚೀಟಿ ಇದ್ದು ಕ್ಷೇತ್ರದಿಂದ ಹೊರಗಿರುವ ಮತದಾರರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ.ಈ ಮತದಾರರ ಮಾಹಿತಿಯನ್ನು ಚುನಾವಣಾ ಅಭ್ಯರ್ಥಿಗಳಿಗೆ ಗೌಪ್ಯವಾಗಿ ನೀಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮತದಾರರ ಮಾಹಿತಿ:
ಚಿಲುಮೆ ಸಂಸ್ಥೆಯ ಸ್ಥಾಪನೆ, ಕಾರ್ಯ ಕ್ಷೇತ್ರ, ನಿರ್ದೇಶಕರು, ಹಣಕಾಸು ವ್ಯವಹಾರ ಸೇರಿದಂತೆ ಪ್ರತಿ ಚಟುವಟಿಕೆಗಳ ಬಗ್ಗೆ ಪೊಲೀಸರು ಆರೋಪಿಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲೆಲ್ಲಿ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ. ಸಂಗ್ರಹ ಮಾಹಿತಿಯನ್ನು ಯಾರೊಂದಿಗೆ ಹಂಚಿಕೊಳ್ಳಲಾಗಿದೆ. ಯಾವ ರಾಜಕಾರಣಿಗಳೊಂದಿಗೆ ಸಂಪರ್ಕವಿದೆ ಎಂಬುದರ ಬಗ್ಗೆಯೂ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಆಡಳಿತಾಧಿಕಾರಿಗೆ ಶೋಧ:
ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿ ಲೋಕೇಶ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಈತ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ‘ಬ್ಲಾಕ್ ಲೆವಲ್ ಆಫೀಸರ್’(ಬಿಎಲ್‌ಓ) ಎಂದು ಗುರುತಿನ ಚೀಟಿ ನೀಡಿ, ಮತದಾರರ ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದೆ. ಈತನ ಬಂಧನದ ಬಳಿಕ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಯಾರಿಗೆಲ್ಲಾ ನೀಡಲಾಗಿತ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಗುರುತಿನ ಚೀಟಿ ಪತ್ತೆ:
ಬಂಧಿತ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಬಳಿ ಕೇಂದ್ರ ಚುನಾವಣಾ ಆಯೋಗದ ಐಡಿ ಕಾರ್ಡ್ (ಗುರುತಿನ ಚೀಟಿ) ಪತ್ತೆಯಾಗಿದೆ. ಮತದಾರರ ಮಾಹಿತಿ ಸಂಗ್ರಹಕ್ಕೆ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ಬಿಎಲ್‌ಓ ಗುರುತಿನ ಚೀಟಿ ನೀಡಲಾಗಿತ್ತು. ಈ ಗುರುತಿನ ಚೀಟಿ ಹಾಕಿಕೊಂಡು ಮತದಾರರ ಮನೆಗೆ ನೇರವಾಗಿ ತೆರಳಿ ಮತದಾರರ ಮಾಹಿತಿ, ಆಧಾರ್ ಮಾಹಿತಿ ಸಂಗ್ರಹಿಸಿದ್ದಾರೆ. ನಗರದ ಕ್ಷೇತ್ರ ಚುನಾವಣಾಧಿಕಾರಿಗಳೇ ಮತದಾರರ ಮಾಹಿತಿ ಸಂಗ್ರಹಕ್ಕೆ ಚಿಲುಮೆ ಸಂಸ್ಥೆಗೆ ಸಾಥ್ ನೀಡಿದ್ದಾರೆ. ಚಿಲುಮೆ ಸಂಸ್ಥೆ ಸಿಬ್ಬಂದಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸುವ ವಿಚಾರ ಕ್ಷೇತ್ರ ಚುನಾವಣಾಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದರು ಎನ್ನಲಾಗಿದೆ. ಹೀಗಾಗಿ ನಗರದ ೨೮ ಚುನಾವಣಾಧಿಕಾರಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಂಬಂಧ ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ.