ಯುವತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಲೋಖಂಡೆ..!

ಕಲಬುರಗಿ:ನ.27:ಮದುವೆಯಾಗುವುದಾಗಿ ಹೇಳಿ ನಾನು ವಂಚಿಸಿದ್ದೇನೆ ಎಂದು ದೆಹಲಿ ಮೂಲದ ಯುವತಿಯೋರ್ವಳು ಆರೋಪಿಸಿದ್ದು, ಆ ಆರೋಪ ನಿರಾಧಾರವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯದ ಬೃಹತ್ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ ಮುಂತಾದವರಿಗೆ ದೆಹಲಿ ಮೂಲದ ಯುವತಿ ದೂರು ಸಲ್ಲಿಸಿದ ಕುರಿತು ಆಕೆಯ ಟ್ವೀಟರ್‍ನಿಂದ ಬಹಿರಂಗಗೊಂಡಿದ್ದು, ಆ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲ ಆರೋಪಗಳನ್ನು ಆಯುಕ್ತ ಸ್ನೇಹಲ್ ಲೋಖಂಡೆ ಅವರು ಅಲ್ಲಗಳೆದಿದ್ದಾರೆ.
ಈ ರೀತಿ ಆರೋಪ ಮಾಡಿದ ಯುವತಿ ವಿರುದ್ಧ ಪೋಲಿಸ್ ಠಾಣೆಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ. ನನ್ನ ವಿರುದ್ಧ ಈ ರೀತಿ ಆರೋಪ ಮಾಡಲು ಕಾರಣ ಗೊತ್ತಾಗಿಲ್ಲ. ಟ್ವಿಟರ್‍ಗೆ ಕೂಡ ಮಾಹಿತಿ ನೀಡಲಾಗಿದೆ. ಮಾನಹಾನಿ ಪ್ರಕರಣ ದಾಖಲಿಸುವುದಾಗಿಯೂ ಸ್ನೇಹಲ್ ಲೋಖಂಡೆ ಅವರು ಹೇಳಿದ್ದಾರೆ.
ಈಗಾಗಲೇ ಶುಕ್ರವಾರದಂದು ಪೋಲಿಸ್ ಠಾಣೆಗೆ ದೂರು ಸಲ್ಲಿಸಿರುವೆ. ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ನಾನು ಈಗಾಗಲೇ ಕಾನೂನು ತಜ್ಞರೊಂದಿಗೆ ಸಮಾಲೋಚನೆ ಮಾಡಿರುವೆ. ಇಂದು ಶನಿವಾರವಾಗಿದ್ದು, ಸೋಮವಾರ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದ್ದಾರೆ.
ಯುವತಿ ಫೇಸ್‍ಬುಕ್‍ನಲ್ಲಿ ಮಾಡಿದ ಚಾಟ್ ಹಾಗೂ ತಾವು ಅರೆಬೆತ್ತಲೆಯಾಗಿರುವ ಭಾವಚಿತ್ರ ಹಾಕಿದ್ದು ಎಲ್ಲವೂ ನಕಲಿಯಾಗಿದೆ. ಅಲ್ಲದೇ ನಾನು ಆಕೆಯೊಂದಿಗೆ ದೆಹಲಿಯಲ್ಲಿ ಜೊತೆಗಿರುವುದು, ಐ-ಪಿಎಲ್ ಮಾತ್ರೆ ನುಂಗಿಸಿದ್ದು ಎಲ್ಲವೂ ಸತ್ಯಕ್ಕೆ ದೂರವಾಗಿದೆ. ಆಕೆಯ ತಾಯಿ ನನ್ನೊಂದಿಗೆ ಮಾತನಾಡಿದ್ದು, ಇಂಡಿಯಲ್ಲಿ ಆಕೆಯ ತಂದೆ ನನ್ನ ತಂದೆಯೊಂದಿಗೆ ಮಾತನಾಡಿದ್ದು ಎಲ್ಲವೂ ಸುಳ್ಳು ಎಂದು ಆಯುಕ್ತ ಸ್ನೇಹಲ್ ಲೋಖಂಡೆ ಅವರು ವಾದಿಸಿದ್ದಾರೆ.
ನಾನು ಯಾವುದೇ ರೀತಿಯಲ್ಲಿ ಯುವತಿಯೊಂದಿಗೆ ಸಂಧಾನಕ್ಕೆ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದ ಲೋಖಂಡೆ ಅವರು, ನನ್ನ ಪರವಾಗಿ ಜಿಲ್ಲಾಧಿಕಾರಿಗಳು ಹಾಗೂ ನಗರ ಪೋಲಿಸ್ ಆಯುಕ್ತರು ಸಂಧಾನ ಮಾಡಲು ಮುಂದಾಗಿದ್ದರು ಎಂಬುದರ ಕುರಿತು ಮಾಡಿರಬಹುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯುವತಿಯು ನಿಮಗೇನು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳಾ?, ಯಾಕೆ ನಿಮ್ಮ ಮೇಲೆ ಇಂತಹ ಗಂಭೀರ ಆರೋಪ ಮಾಡುತ್ತಿದ್ದಾಳೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೋಖಂಡೆ ಅವರು, ನನಗೇನೂ ಆ ಕುರಿತು ಗೊತ್ತಿಲ್ಲ. ಇಲ್ಲಿಯವರೆಗೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ಹೇಳುವ ಮೂಲಕ ಮುಂದೆ ಹಣಕ್ಕಾಗಿ ಬೇಡಿಕೆ ಇಡುವ ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದಾರೆ.
ನಾನು ಸೈಬರ್ ಕ್ರೈಂಗೂ ಸಹ ದೂರು ಸಲ್ಲಿಸಿದ್ದೇನೆ. ಪೋಲಿಸರಿಗೂ ದೂರು ಸಲ್ಲಿಸಿರುವೆ. ಸೋಮವಾರದಂದು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಎಲ್ಲ ರೀತಿಯ ಕಾನೂನು ಕ್ರಮಗಳನ್ನು ನಾನು ನಿರಪರಾಧಿ ಎಂದೇ ಕೈಗೊಂಡಿರುವೆ ಎಂದು ಸ್ನೇಹಲ್ ಲೋಖಂಡೆ ಅವರು ಹೇಳಿದ್ದಾರೆ.
ಯುವತಿ ಆರೋಪ: ಮಹಾನಗರ ಪಾಲಿಕೆಯ ಆಯುಕ್ತರೂ ಆಗಿರುವ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ಅವರು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ದೆಹಲಿ ಮೂಲದ ಯುವತಿ ಗಂಭೀರ ಆರೋಪವನ್ನು ಮಾಡಿದ್ದಾಳೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್. ನಿರಾಣಿ ಅವರಿಗೆ ಟ್ವಿಟರ್ ಮೂಲಕ ಪತ್ರ ಬರೆದು ಲಗತ್ತಿಸಿದ್ದಾಳೆ. ಆ ಪತ್ರದಲ್ಲಿ 2017ರ ಬ್ಯಾಚ್‍ನ ಐಎಎಸ್ ಅಧಿಕಾರಿ ಲೋಖಂಡೆಯು ತನ್ನ ಜೊತೆಗೆ ಹೊಟೇಲ್‍ಗಳಲ್ಲಿ ಕಾಲ ಕಳೆದ. ಹೊರಗಡೆ ಸುತ್ತಾಡಿದ. ವಾಟ್ಸಾಪ್‍ಗಳಲ್ಲಿ ಚಾಟ್ ಮಾಡಿದ್ದ ಬಗ್ಗೆ ದಿನಾಂಕ, ಸ್ಥಳ ಸಮೇತ ವಿವರಿಸಿದ್ದು, ವಾಟ್ಸಪ್ ಚಾಟನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಯುವತಿ ಪತ್ರ: ಯುಪಿಎಸ್‍ಸಿ ಪರೀಕ್ಷೆ ಬರೆಯುತ್ತಿದ್ದಾಗ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಸ್ನೇಹಲ್ ಲೋಖಂಡೆ ನನ್ನ ಮೇಲೆ ಆಸಕ್ತಿ ತೋರಿಸಿದರು. 2019ರ ಮೇ 26ರಂದು ದೆಹಲಿಯಲ್ಲಿ ನನ್ನನ್ನು ಭೇಟಿ ಆಗಿದ್ದ ಸ್ನೇಹಲ್ ಮೂರು ದಿನಗಳವರೆಗೆ ನನ್ನ ಜೊತೆಗೆ ಇದ್ದರಲ್ಲದೇ ನನ್ನ ಮದ್ವೆ ಆಗುವುದಾಗಿ ಮಾತು ಕೊಟ್ಟಿದ್ದರು ಎಂದು ಯುವತಿ ಪತ್ರದಲ್ಲಿ ಮಾಹಿತಿ ನೀಡಿದ್ದಾಳೆ.
ನನ್ನ ಜೊತೆಗೆ ಇರುವ ಸಲುವಾಗಿಯೇ ಟ್ರೈನಿಂಗ್‍ಗಾಗಿ ದೆಹಲಿಗೆ ಬಂದಿದ್ದ ಸ್ನೇಹಲ್ ಬಸ್ ತಪ್ಪಿಸಿಕೊಂಡು ದೆಹಲಿಯಲ್ಲಿಯೇ ನನ್ನ ಜೊತೆಗೆ ಒಂದು ದಿನ ಇದ್ದರು. ನನ್ನ ಹುಟ್ಟುಹಬ್ಬ ಆಚರಿಸಲು ನನ್ನ ತಾಯಿಯ ಅನುಮತಿ ಪಡೆದು ಜುಲೈ 8ರಂದು ಹೌನ್ಜ್‍ಖಾಸ್‍ಗೆ ಮಧ್ಯರಾತ್ರಿ ಹೋಗಿದ್ದೆವು. 2019ರ ಜುಲೈ 20ರಂದು ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ ಅವರು, ಕೆ.ಜಿ. ಮಾರ್ಗನಲ್ಲಿರುವ ತನ್ನ ವಸತಿ ನಿಲಯಕ್ಕೂ ಬರುವಂತೆ ಹೇಳಿ ಅಲ್ಲಿ ನಾವಿಬ್ಬರೂ ಒಂದು ರಾತ್ರಿ ಜೊತೆಯಾಗಿ ಕಳೆದಿದ್ದೆವು. ಮರು ದಿನ ಭೇಟಿ ಆಗಿದ್ದ ಅವರು ಐಪಿಎಲ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದರು ಎಂದು ಆಕೆ ವಿವರಿಸಿದ್ದಾಳೆ.
ಆಗಸ್ಟ್ 4ರಂದು ರಾಯಲ್ ಪ್ಲಾಜಾದಲ್ಲಿ ಅವರು ಕೋಣೆಯೊಂದನ್ನು ಬುಕ್ ಮಾಡಿದ್ದರು. ಆವತ್ತು ಅಲ್ಲಿ ಒಟ್ಟಿಗೆ ಉಳಿದುಕೊಂಡೆವು. ದೆಹಲಿಯಲ್ಲಿ ತರಬೇತಿಗೆ ಬಂದಿದ್ದ ವೇಳೆ ಅವರು ನನ್ನನ್ನು ಪ್ರತಿನಿತ್ಯ ಭೇಟಿ ಆಗುತ್ತಿದ್ದರು. ನಾನು ಎಲ್ಲವನ್ನೂ ನನ್ನ ತಾಯಿಗೆ ಹೇಳಿದ ಬಳಿಕ ನನ್ನ ತಾಯಿ ಅವರ ವಸತಿ ನಿಲಯದಲ್ಲಿ ಭೇಟಿಯಾಗಿ ಮದುವೆ ಕುರಿತು ಮಾತನಾಡಿದರು ಮತ್ತು ಆಗ ಮದುವೆಗೆ ನನಗೆ ಸ್ವಲ್ಪ ಸಮಯ ಬೇಕು ಎಂದು ಸ್ನೇಹಲ್ ಹೇಳಿದ್ದರು ಎಂದು ಆಕೆ ತಿಳಿಸಿದ್ದಾಳೆ.
ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾಗಿ ಸ್ನೇಹಲ್ ಲೋಖಂಡೆ ಅವರು ವರ್ಗಾವಣೆಆದ ಬಳಿಕ ಅವರು ನನ್ನನ್ನು ದೂರವಿರಿಸಲು ಶುರು ಮಾಡಿದರು. ನಾನು ಕರೆ ಮಾಡಿದಾಗಲೆಲ್ಲ ಬಿಡುವಿಲ್ಲದ ಕೆಲಸದಲ್ಲಿ ಇರುವುದಾಗಿಯೂ ಹೇಳುತ್ತಿದ್ದರು. ಕಳೆದ 2020ರ ಜನವರಿ 26ರಂದು ನನ್ನ ಹೆತ್ತವರು ಇಂಡಿಗೆ ತೆರಳಿ ಅವರ ತಂದೆ ಸುಧಾಕರ್ ಲೋಖಂಡೆ ಅವರೊಂದಿಗೆ ಮಾತನಾಡಿದರು ಮತ್ತು ಅವರು ನಾಗಪೂರದಲ್ಲಿರುವ ತಮ್ಮ ಸಹೋದರ ಜೊತೆಗೆ ಆದಷ್ಟು ಬೇಗ ಮಾತನಾಡುವುದಾಗಿಯೂ ಮತ್ತು ಶೀಘ್ರವೇ ದೆಹಲಿಗೆ ಬರುವುದಾಗಿಯೂ ಹೇಳಿದ್ದರು ಎಂದು ಆಕೆ ಆ ಪತ್ರದಲ್ಲಿ ಮಾಹಿತಿ ನೀಡಿದ್ದಾಳೆ.
15 ದಿನಗಳ ಬಳಿಕ ನನ್ನ ತಂದೆ ಸುಧಾಕರ್ ಲೋಖಂಡೆ ಅವರಿಗೆ ಕರೆ ಮಾಡಿದಾಗ ಅವರು ಕೆಟ್ಟದ್ದಾಗಿ ಮಾತನಾಡಿದರು ಮತ್ತು ನಿಮ್ಮ ಪುತ್ರಿ ನನ್ನ ಪುತ್ರನ ಎದುರು ನಿಲ್ಲಲ್ಲು ಯೋಗ್ಯಳಲ್ಲ ಎಂದರು. ಆ ಬಳಿಕ ಸ್ನೇಹಲ್ ಲೋಖಂಡೆಯಾಗಲೀ ಅವರ ತಂದೆಯಾಗಲಿ ನಮಗೆ ಕರೆ ಮಾಡಿಲ್ಲ. ನನ್ನನ್ನು ಬಳಸಿಕೊಂಡು ನನ್ನ ಜೀವನ ಹಾಳು ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಯುವತಿ ದೂರಿದ್ದಾಳೆ.
ಸ್ಹೇಹಲ್ ಅವರಿಗೆ ಈ ಮೊದಲು ಸಂಬಂಧವಿತ್ತು ಮತ್ತು ಅವರ ಸ್ನೇಹಿತೆ ಆ ಸಂಬಂಧದ ಅವಧಿಯಲ್ಲಿ ಐ-ಪಿಎಲ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಇದ್ದರು. ಆಕೆ ಮದುವೆ ಆಗುವಂತೆ ಕೇಳಿದಾಗ ಆಕೆಯಿಂದಲೂ ದೂರ ಆಗಿದ್ದಾಗಿ ಅವರೇ ನನಗೆ ಆರಂಭದಲ್ಲಿ ಹೇಳಿದ್ದರು. ಹುದ್ದೆ ಮತ್ತು ಪ್ರತಿಷ್ಠೆ ಬಳಸಿಕೊಂಡು ಹುಡುಗಿಯರನ್ನು ಆಕರ್ಷಿಸಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಜೊತೆಗೆ ಎರಡು ವರ್ಷಗಳವರೆಗೆ ಸಂಬಂಧದಲ್ಲಿದ್ದ ನನಗೂ ಹಾಗೆಯೇ ಮಾಡಿದ್ದಾರೆ ಎಂದು ಆಕೆ ಅವಲತ್ತುಕೊಂಡಿದ್ದಾಳೆ.
ಮದುವೆಯ ನೆಪದಲ್ಲಿ ನನಗೆ ಬಳಸಿಕೊಂಡಿದ್ದಾರೆ. ಇತರ ವೈಯಕ್ತಿಕ, ದೈಹಿಕ ಮತ್ತು ಮಾನಸಿಕ ಜೀವನದಲ್ಲಿ ಆಟ ಆಡುವ ಈ ವ್ಯಕ್ತಿಯನ್ನು ಶಿಕ್ಷಿಸಬೇಕು. ಅವರು ಜೈಲಿನಲ್ಲಿ ಇರಬೇಕು. ಇಲ್ಲವಾದಲ್ಲಿ ಅವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹ ಅಪರಾಧಕ್ಕಾಗಿ ಅವರು ಜೈಲಿನಲ್ಲಿ ಇರಬೇಕು ಎಂದು ಯುವತಿ ಆಕ್ರೋಶ ಹೊರಹಾಕಿದ್ದಾಳೆ.
ಈ ಹಿನ್ನೆಲೆಯಲ್ಲಿ ನಾನು ಗೌರವಾನ್ವಿತ ಪ್ರಾಧಿಕಾರದಿಂದ ನ್ಯಾಯವನ್ನು ನಿರೀಕ್ಷಿಸುತ್ತಿದ್ದೇನೆ ಮತ್ತು ಪ್ರಾಧಿಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಆ ಪತ್ರದಲ್ಲಿ ಮನವಿ ಮಾಡಿದ್ದಾಳೆ. ಈಗ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಅವರು ಯುವತಿಯ ವಿರುದ್ಧ ಎಲ್ಲ ರೀತಿಯ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಇಡೀ ವಿವಾದ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಯೊಂದಿಗೆ ವ್ಯಾಪಕ ಕುತೂಹಲಕ್ಕೂ ಕಾರಣವಾಗಿದೆ.