ಪಾಲಿಕೆ ಆಯುಕ್ತರಿಗೆ ಆಪ್ ಮನವಿ

ಹುಬ್ಬಳ್ಳಿ, ನ 3- ಮೇದಾರ ಓಣಿ ಶುಚಿತ್ವ ಕಾಪಾಡಲು ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿದ್ದ ಭರವಸೆಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಮುಗಿಸುವಂತೆ ಆಮ್ ಆದ್ಮಿ ಪಕ್ಷದ ಮುಖಂಡರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಅವರ ನೇತೃತ್ವದಲ್ಲಿ ನಗರದ ಹೃದಯ ಭಾಗವಾದ ಮೇದಾರ ಓಣಿ, ಮನಿಯಾರ್ ಕಾಂಪ್ಲೆಕ್ಸ್ ಮತ್ತು ಬ್ರಾಡ್ ವೇ ಬಳಿಯ ನಾರಾಯಣ ಚೌಕ್ ಸುತ್ತುಮುತ್ತಲಿನ ಪ್ರದೇಶದಲ್ಲಿನ ಕೊಳಚೆ ಕುರಿತು ಸಮೀಕ್ಷೆ ಕಾರ್ಯ ನಡೆಸಿ, ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಕಾರ್ಯನಿರ್ವಾಹಕ ಅಭಿಯಂತರರು, ವಲಯ -9 ರ ಸಹಾಯಕ ಆಯುಕ್ತರು ಸ್ಥಳಕ್ಕೆ ಭೇಟಿ ಮಾಡಿ ತಾತ್ಕಾಲಿಕ ಪರಿಹಾರ ಕಾರ್ಯ ಮಾಡಿ, ಕೂಡಲೇ ಈ ಭಾಗದಲ್ಲಿ ಮಾದರಿ ಶೌಚಾಲಯ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ನೇತೃತ್ವದ ತಂಡ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರ ಕಾರ್ಯವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಮಾಡಬೇಕೆಂದು ಸುದೀರ್ಘ ಚರ್ಚೆ ನಡೆಸಿ ಮನವಿ ಸಲ್ಲಿಸಿದರು. ಇದಕ್ಕೆ ಪಾಲಿಕೆ ಆಯುಕ್ತರು ಎಲ್ಲ ಸಮಸ್ಯೆಗಳನ್ನು ಪಾಲಿಕೆ ಅಧಿಕಾರಿಗಳು ತಿಳಿಸಿದ ರೀತಿಯಲ್ಲಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ಅನಂತಕುಮಾರ ಭಾರತೀಯ, ಲತಾ ಅಂಗಡಿ, ಶೌಕತ್, ಸಾಧಿಕ್, ಡೇನಿಯಲ್ ಐಕೋಸ್ ಸೇರಿದಂತೆ ಮುಂತಾದವರು ಇದ್ದರು.