ಪಾಲಿಕೆ ಆಯುಕ್ತರಿಂದ ನ್ಯಾಯಾಂಗ ನಿಂದನೆ; ಆರೋಪ

ದಾವಣಗೆರೆ.ಜೂ.೧೧; ಮಹಾನಗರ ಪಾಲಿಕೆ ವ್ಯಾಪ್ತಿಯ ಆವರಗೆರೆ ಗ್ರಾಮದಲ್ಲಿರುವ ಸ್ಮಶಾನದ ಕಾಮಗಾರಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರು ಸುಳ್ಳು ಮಾಹಿತಿ ನೀಡುವ ಮೂಲಕ ನ್ಯಾಯಾಲಯದ ದಿಕ್ಕನ್ನೇ ತಪ್ಪಿಸಲು ಕುತಂತ್ರ ನಡೆಸಿದ್ದು, ಈ ಕುರಿತು ಜಿಲ್ಲಾಧಿಕಾರಿ, ಐಜಿಪಿ, ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ನ್ಯಾಯವಾದಿ ಎಸ್.ಪರಮೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಶಾನ ಕಾಮಗಾರಿ ಸಂಬಂಧ ಈಗಾಗಲೇ ದಾವಣಗೆರೆಯ ಕಿರಿಯ ವಿಭಾಗದ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವಾ ಅಲ್ಲದೇ ಎಂಎ ದಾವೆಯನ್ನು ದಾಖಲು ಮಾಡಲಾಗಿದೆ. ಕಾರಣ ಕರ್ತವ್ಯ ಲೋಪ ಎಸಗಿರುವ ಪಾಲಿಕೆ ಆಯುಕ್ತರು ನ್ಯಾಯಾಂಗ ನಿಂದನೆ ಮಾಡಿದ್ದು ಈ ಕೂಡಲೇ ರಾಜೀನಾಮೆ ನೀಡಬೇಕು. ಆಯುಕ್ತರು ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ನ್ಯಾಯಾಲಯ ಮಾತ್ರವಲ್ಲದೆ ನಗರದ ಜನತೆಗೂ ಸುಳ್ಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಹಕ್ಕಿಗೆ ಚ್ಯುತಿ ಬಂದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆವರಗೆರೆ ಗ್ರಾಮದಲ್ಲಿ ಸ್ಮಶಾನದ ಕಾಮಗಾರಿ ಆದೇಶದಂತೆ ನಡೆಸದೇ ತಮಗೆ ತೋಚಿದಂತೆ ಮಾಡುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಫೋಟೊ ಮತ್ತು ಸಿಡಿಗಳನ್ನು ನೀಡಿದ್ದೇವೆ. ಕಾಮಗಾರಿ ಆಗಬೇಕಾದ ಜಾಗ ಬಿಟ್ಟು ಬೇರೆ ಜಾಗದಲ್ಲಿ ಕಾಮಗಾರಿ ನಡೆಸಿರುವ ಪಾಲಿಕೆ ಆಯುಕ್ತರು ಹಾಗು ಗುತ್ತಿಗೆದಾರರು ವರ್ಕ್ ಆರ್ಡರ್ ಆಧಾರದ ಮೇಲೆ ಕಾಮಗಾರಿ ನಡೆಸಿರುವುದಾಗಿ ಕೋರ್ಟ್ ನಲ್ಲಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ಈಗಾಗಲೇ ಕಳೆದ 9 ತಿಂಗಳ ಹಿಂದೆಯೇ ಮುಗಿದಿದೆ ಎಂದು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದ್ದಾರೆ. ಇದರ ವಿರುದ್ಧ ಪಿಸಿಆರ್ ಹೂಡಲಾಗುವುದು ಎಂದು ಮಾಹಿತಿ ನೀಡಿದರು.ಪಾಲಿಕೆ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿದ ತಕರಾರು ಹಾಗೂ ಪ್ರಮಾಣ ಪತ್ರಗಳು ಸುಳ್ಳಿನಿಂದ ಕೂಡಿವೆ. ಅಲ್ಲದೇ ಕಾಮಗಾರಿ ಸ್ಥಳದಲ್ಲಿ ಯಾವ ಕಾಮಗಾರಿ, ಎಷ್ಟು ಅನುದಾನದ ಕಾಮಗಾರಿ ಎಂಬ ನಾಮಫಲಕ ಕೂಡ ಹಾಕಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.  ಇದಲ್ಲದೆ ಆಯುಕ್ತರಿಗೆ ನಾನು ಮುಕ್ತವಾಗಿ ಆಹ್ವಾನ ನೀಡುತ್ತಿದ್ದು ಸ್ಥಳಕ್ಕೆ ಬಂದು ಕಾಮಗಾರಿ ಸರಿಯಾಗಿ ಇದೆ ಎಂದು ಸಾಬೀತು ಮಾಡಿದರೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಕೀಲ ಗೋಪಾಲ್, ಯೋಗೇಶ್ ಇದ್ದರು.