ಪಾಲಿಕೆ ಅಧಿಕಾರಿಗಳಿಗೆ ಡಿಕೆಶಿ ಚಾಟಿ

ಬೆಂಗಳೂರು, ಮೇ.೨೯- ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಮಗಾರಿಗಳ ಕುರಿತು ಚಾಟಿ ಬಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ವಿಶೇಷ ಆಯುಕ್ತರು, ಎಂಟು ವಲಯದ ಆಯುಕ್ತರೊಂದಿಗೆ ಸಭೆ ನಡೆಸಿ ಸದ್ಯದ ಪರಿಸ್ಥಿತಿ ಕುರಿತು ಮಾಹಿತಿ ಕಲೆ ಹಾಕಿದರು.ಬಿಬಿಎಂಪಿ ಆದಾಯ ಸ್ವೀಕಾರ ಹಾಗೂ ಖರ್ಚು ವೆಚ್ಚಗಳ ಕುರಿತು ಮಾಹಿತಿ ವಿನಿಮಯ ಮಾಡಲಾಯಿತು.ಸ್ವಂತ ಸಂಪನ್ಮೂಲ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅನುದಾನ ಇವುಗಳ ಬಳಕೆ ಅಗತ್ಯವಿರೋ ಹೆಚ್ಚುವರಿ ಬಜೆಟ್ ಕುರಿತ ಮಾಹಿತಿ ಅನ್ನು ಶಿವಕುಮಾರ್ ಪಡೆದರು.
ಪ್ರಮುಖವಾಗಿ ಸಭೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ಅನುಮೋದಿಸಲ್ಪಟ್ಟಿದ್ದ ಜಾಬ್ ಕೋಡ್, ವರ್ಕ್ ಆರ್ಡರ್ ಹಾಗೂ ಟೆಂಡರ್ ಬಗ್ಗೆ ವಸ್ತುಸ್ಥಿತಿ ಕುರಿತು ಪ್ರಸ್ತಾಪ ಮಾಡಲಾಯಿತು. ಜತೆಗೆ ಜೂನ್ ಮೊದಲನೇ ವಾರದಲ್ಲಿ ಮುಂಗಾರು ಆರಂಭವಾಗುತ್ತೆ. ಈ ಸಂದರ್ಭದಲ್ಲಿ ಜನರಿಗೆ ತೊಂದರೆ ಆಗದಂತೆ ಕ್ರಮ ಜರುಗಿಸಲೇಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.