ಪಾಲಿಕೆಯ ಸೋಲು ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ ತಪ್ಪಿತೇ?

ಬಳ್ಳಾರಿ, ಮೇ.03: ನಿನ್ನೆ ದಿನ ರಾಜ್ಯದ 6 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬದಲಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯೂ ಬದಲಾಗಬೇಕಿತ್ತು. ಆದರೆ ಇಲ್ಲಿನ ಪಾಲಿಕೆಯಲ್ಲಿನ ಬಿಜೆಪಿಯ ಸೋಲು ಇದಕ್ಕೆ ಅವಕಾಶ ನೀಡದಂತೆ ಮಾಡಿದೆ ಎನ್ನಬಹುದಾಗಿದೆ.
ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡಿ ವಿಜಯನಗರ ಜಿಲ್ಲೆ ರಚನೆ ಮಾಡಿದೆ. ವಿಶೇಷ ಅಧಿಕಾರಿಯನ್ನು ನೇಮಕ ಮಾಡಿ ಜಿಲ್ಲಾಮಟ್ಟದ ಕಛೇರಿ ಅಧಿಕಾರಿಗಳ ನೇಮಕವೂ ನಡೆದಿದೆ.
ಹೀಗಾಗಿ ಆ ಜಿಲ್ಲೆಗೆ ವಾಸ್ತವವಾಗಿ ವಿಜಯನಗರ ಶಾಸಕ ಹಾಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಉಸ್ತುವಾರಿಯಾಗಿರುವ ಆನಂದ್ ಸಿಂಗ್ ಅವರನ್ನು ನೇಮಕ ಮಾಡಿ ಬಳ್ಳಾರಿ ಜಿಲ್ಲೆಗೆ ಅವರೇ ಬಯಸಿದಂತೆ ಶ್ರೀರಾಮುಲು ಅವರಿಗೆ ಉಸ್ತುವಾರಿ ವಹಿಸುತ್ತಾರೆಂಬ ಮಾತುಗಳು ಕೇಳಿ ಬಂದಿದ್ದವು.
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೂ ಸ್ವತಃ ಆನಂದ್ ಸಿಂಗ್ ಅವರು ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಶ್ರೀರಾಮುಲು ಅವರಿಗೆ ನೀಡಲಿ ಇದಕ್ಕೆ ನನ್ನ ತಕರಾರೇನಿಲ್ಲ. ಈ ವಿಷಯ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದಿದ್ದರು.
ಅಲ್ಲದೆ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರು ಸಹ ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು.
ಆದರೆ ನಿನ್ನೆ ದಿನ ಮುಖ್ಯಮಂತ್ರಿಗಳು ಬಾಗಲಕೋಟೆ, ಬೀದರ್ ಬೆಳಗಾಂ, ಕೋಲಾರ, ಕಲ್ಬುರ್ಗಿ, ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿಯನ್ನು ಬದಲು ಮಾಡಿದ್ದಾರೆ. ಬಳ್ಳಾರಿಯನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರೀರಾಮುಲು ವಿಫಲರಾಗಿದ್ದಕ್ಕೆ ಮಾಡಿಲ್ಲ ಎನ್ನಲಾಗುತ್ತಿದೆ