ಪಾಲಿಕೆಯಿಂದ 12.49 ಕೋಟಿ ಉಳಿತಾಯ ಬಜೆಟ್ ಮಂಡನೆ

ದಾವಣಗೆರೆ. ಏ.೧೬; 2021-22ನೇ ಆರ್ಥಿಕ ವರ್ಷಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ್ 12.29 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ  ನಡೆದ ಆಯ-ವ್ಯಯ ಮಂಡನ ಸಭೆಯಲ್ಲಿ ವಿಶ್ವಗುರು ಬಸವಣ್ಣನವರ ವಚನದ ಸಾಲುಗಳನ್ನು ಓದಿ, 12.49 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದ ಮೇಯರ್ ಎಸ್.ಟಿ.ವೀರೇಶ್, ನಗರದ ಅಭಿವೃದ್ಧಿಗೆ ನನ್ನದೇ ಆದ ಕೆಲವು ಕನಸುಗಳನ್ನು ಹೊಂದಿದ್ದು, ಅವುಗಳನ್ನು ನನಸು ಮಾಡಲು ಸೀಮಿತ ಸಂಪನ್ಮೂಲಗಳ ಮಿತಿಯಲ್ಲಿಯೇ ಸಾಧ್ಯವಾದಷ್ಟು ಉತ್ತಮ ಆಯವ್ಯಯ ಸಿದ್ಧಪಡಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು. ಪಾಲಿಕೆಯಲ್ಲಿ ಪ್ರಸ್ತುತ ಇರುವ ಆರಂಭಿಕ ಶಿಲ್ಕು 84.14 ಕೋಟಿ ರೂ.ಗಳಿದ್ದು, ರಾಜಸ್ವ ಸ್ವೀಕೃತಿಯಿಂದ 127.10 ಕೋಟಿ ರೂ, ಬಂಡವಾಳ ಜಮೆಯಿಂದ 99.70 ಕೋಟಿ ರೂ. ಅಸಾಮಾನ್ಯ ಜಮೆಗಳಿಂದ 122.34 ಕೋಟಿ ಸೇರಿದಂತೆ 2021-22ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು 433.29 ಕೋಟಿ ರೂಪಾಯಿ ಆದಾಯ ಕ್ರೊಢೀಕರಿಸುವ ನಿರೀಕ್ಷೆ ಹೊಂದಿದ್ದು, ರಾಜಸ್ವ ಪಾವತಿಗಾಗಿ 114.31 ಕೋಟಿ ರೂ, ಬಂಡವಾಳ ಪಾವತಿಗಾಗಿ 146.43 ಕೋಟಿ ಹಾಗೂ ಅಸಾಮಾನ್ಯ ಪಾವತಿಗಾಗಿ 160.05 ಕೋಟಿ ಸೇರಿದಂತೆ ಒಟ್ಟು 420.79 ಕೋಟಿ ರೂ.ಗಳನ್ನು ಪಾಲಿಕೆ ಸಿಬ್ಬಂದಿಯ ವೇತನ, ವಿವಿಧ ಅಭಿವೃದ್ಧಿ ಕಾಮಗಾರಿ, ನಾಗರೀಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ 12.49 ಕೋಟಿ ರೂಪಾಯಿಗಳನ್ನು ಉಳಿಸುವ ಗುರಿಯನ್ನು ಪಾಲಿಕೆ ಹೊಂದಿದೆ ಎಂದು ಮಾಹಿತಿ ನೀಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ವಿವಿಧ ಆದಾಯ ಮೂಲಗಳಾದ ರಾಜಸ್ವ ಅನುದಾನದಡಿಯಲ್ಲಿ ಎಸ್‌ಎಫ್‌ಸಿ ಮುಕ್ತ ನಿಧಿಯಿಂದ 6.72 ಕೋಟಿ ರೂ., ಎಸ್‌ಎಫ್‌ಸಿ ವಿದ್ಯುತ್ ಅನುದಾನದಡಿ 24.76 ಕೋಟಿ ರೂ, ಎಸ್‌ಎಫ್‌ಸಿ ವೇತನ ಅನುದಾನದಿಂದ 37.96 ಕೋಟಿ ರೂ. ಆದಾಯವನ್ನು ನಿರೀಕ್ಷಿಸಿದೆ. ಅಲ್ಲದೆ, ಬಂಡವಾಳ ಹಾಗೂ ವಿಶೇಷ ಅನುದಾನ ಮೂಲಗಳಾದ 15ನೇ ಹಣಕಾಸು ಆಯೋಗ ಅನುದಾನದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 2020-21ನೇ ಸಾಲಿನಲ್ಲಿ 34.63 ಕೋಟಿ ರೂ, ಬಿಡುಗಡೆ ಮಾಡಿದ್ದು, 2021-22ನೇ ಸಾಲಿಗೆ 25.79 ಕೋಟಿ ಅನುದಾನ ನಿಗದಿ ಪಡಿಸಿದೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 125 ಕೋಟಿ ರೂ, ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದಡಿ 10 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.ಅಲ್ಲದೆ, ಪಾಲಿಕೆಯ ಸ್ವಂತ ಆದಾಯದ ಮೂಲಗಳಾದ ಆಸ್ತಿ ತೆರಿಗೆಯಿಂದ 22 ಕೋಟಿ ರೂ, ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 55 ಲಕ್ಷ ರೂ, ನೀರು ಸರಬರಾಜು ಬಳಕೆದಾರರ ಶುಲ್ಕದಿಂದ 6 ಕೋಟಿ ರೂ. ನೀರು ಸರಬರಾಜು ಸಂಪರ್ಕ ಶುಲ್ಕದಿಂದ 25 ಲಕ್ಷ ರೂ. ಒಳಚರಂಡಿ ಸಂಪರ್ಕ ಬಳಕೆದಾರರಿಂದ ಶುಲ್ಕದ ರೂಪದಲ್ಲಿ 40 ಲಕ್ಷ ರೂ. ಸಂತೆ ಸುಂಕದಿAದ 50 ಲಕ್ಷ ರೂ. ಘನತಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕಿಂದ 35 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕದಿಂದ 1 ಕೋಟಿ ರೂ. ಉದ್ದಿಮೆ ಪರವಾನಿಗೆ ಶುಲ್ಕದಿಂದ 80 ಲಕ್ಷ, ರಸ್ತೆ ಕಡಿತ ಶುಲ್ಕದಿಂದ 75 ಲಕ್ಷ ರೂ, ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚುವರಿ ಅಧಿಬಾರ ಶುಲ್ಕದಿಂದ 50 ಲಕ್ಷ ರೂ. ಅಭಿವೃದ್ಧಿ ಶುಲ್ಕ 1.70 ಕೋಟಿ ಸೇರಿದಂತೆ ಈ ಎಲ್ಲಾ ಮೂಲಗಳಿಂದ 208.24 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ಆಯವ್ಯಯ ಸಭೆಯಲ್ಲಿ ಪಾಲಿಕೆ ಉಪ ಮೇಯರ್ ಶಿಲ್ಪಾ ಜಯಪ್ರಕಾಶ್, ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ಶ್ರೀನಿವಾಸ್, ಎಲ್.ಡಿ.ಗೋಣೆಪ್ಪ, ಉಮಾ ಪ್ರಕಾಶ್, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.