ಪಾಲಿಕೆಯಿಂದ ಪ್ಲಾಸ್ಟಿಕ್ ನಿಷೇಧ ಪತ್ರಿಕಾ ಹೇಳಿಕೆಗೆ ಸೀಮಿತವೇ

ಬಳ್ಳಾರಿ, ಜ.12: ನಗರದಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ತೆಳವಾದ ಪ್ಲಾಸ್ಟಿಕ್ ಚೀಲ ಮೊದಲಾದವುಗಳ ನಿಷೇಧ ಎಂಬ ಮಹಾನಗರ ಪಾಲಿಕೆಯ ಹೇಳಿಕೆ ಕೇವಲ ಮಾಧ್ಯಮಗಳಲ್ಲಿ ಪ್ರಕಟಿಸಲು ಸೀಮಿತವೇ ಎಂಬ ಪ್ರಶ್ನೆ ಜನರದ್ದಾಗಿದೆ.
ನಗರದ ಬಹುತೇಕ ಕಡೆಗಳಲ್ಲಿ ನಿಷೇಧಿತ ತೆಳುವಾದ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ಎಗ್ಗಿಲ್ಲದೆ ನಡೆದಿದೆ. ಪರಿಸರಕ್ಕೆ ಹಾನಿಯುಂಟು ಮಾಡುವ ಇಂತಹ ಪ್ಲಾಸ್ಟಿಕ್ ಚೀಲ, ತಟ್ಟೆ, ಲೋಟ ಮೊದಲಾದವುಗಳ ಮಾರಾಟ ನಿಷೇಧ ಮಾಡಿದೆ.
ತಟ್ಟೆ ಲೋಟಗಳ ಬಳಕೆ ಬಹುತೇಕ ಕಡಿಮೆಯಾಗಿದೆ. ಆದರೆ ಕೈಚೀಲಗಳು, ಕವರ್ ಬಳಕೆ ಮಾತ್ರ ಯಥೇಚ್ಛವಾಗಿದೆ.
ಬಹುತೇಕ ಹುಣ್ಣು, ತರಕಾರಿ ಮಾರಾಟಗಾರರು ಅಲ್ಲದೆ ಇತರೆ ವಸ್ತುಗಳು ಬೀದಿ ಬದಿಯ ಮಾರಾಟಗಾರರಲ್ಲಿ ಇದು ಹೆಚ್ಚಿದೆ. ಇನ್ನು ದೇವಸ್ಥಾನಗಳ ಬಳಿ ಹಣ್ಣು, ತೆಂಗಿನಕಾಯಿ, ಹೂ ಮಾರಾಟಗಾರರು ನಿಷೇಧಿತ ಈ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿದ್ದಾರೆ.
ಇವುಗಳನ್ನು ಬಳಕೆ ಮಾಡದಂತೆ ಪಾಲಿಕೆ ನಿಷೇಧಿಸಿ ಆಗಾಗ್ಗೆ ಆದೇಶ ಹೊರಡಿಸುತ್ತಲೇ ಇರುತ್ತದೆ. ಆದರೆ ಬಳಕೆ, ಮಾರಾಟ ಮಾತ್ರ ಸ್ಥಗಿತಗೊಂಡಿಲ್ಲ, ಕಾರಣ ಬಳಕೆ ಮತ್ತು ಮಾರಾಟ ಮಾಡುವವರ ಮೇಲೆ ಇವರು ತೆಗೆದುಕೊಳ್ಳುತ್ತಿರುವ ಕ್ರಮ ಸರಿಯಾಗಿ ಇಲ್ಲದಿರುವುದೆಂದೇ ಹೇಳಬಹುದು.
ಈ ಹಿಂದೆ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಆಗಾಗ್ಗೆ ದಾಳಿ ಮಾಡಿ ಇವುಗಳ ಬಳಕೆಗೆ ಒಂದಿಷ್ಟು ಕಡಿವಾಣ ಹಾಕಿದ್ದರು. ಆದರೆ ಅವರು ಅಮಾನತ್ತುಗೊಂಡ ಮೇಲೆ ಪ್ಲಾಸ್ಟಿಕ್ ಕವರ್ ಗಳ ಬಳಕೆ ಹೆಚ್ಚಿದೆ.
ಈ ನಿಟ್ಟಿನಲ್ಲಿ ಪಾಲಿಕೆಯ ಈಗಿನ ಅಧಿಕಾರಿಗಳು ಮೌನವಹಿಸಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ. ಪ್ಲಾಸ್ಟಿಕ್ ಕವರ್ ಉತ್ಪಾದಕರಿಂದ ಇವರಿಗೆ ದೊಡ್ಡ ಮೊತ್ತದ ಪಾಲಿದೆಯೇ ಇಲ್ಲದಿದ್ದರೆ ಮಾರಾಟಗಾರರು, ಉತ್ಪಾದಕರು ಬಳಕೆದಾರರ ಮೇಲೆ ಏಕೆ ಕ್ರಮ ತೆಗೆದುಕೊಂಡು ದಂಡ ವಿಧಿಸುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.