ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಏಳು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹುನ್ನಾರ: ಕಾಂಗ್ರೆಸ್ ಆರೋಪ

ಕಲಬುರಗಿ, ನ.13: ಇದೇ ನವೆಂಬರ್ 20ರಂದು ಜರುಗಲಿರುವ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಯು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಸಂಬಂಧವೇ ಇಲ್ಲದ ಏಳು ಜನ ತನ್ನ ಪಕ್ಷದ ರಾಜ್ಯ ವಿಧಾನ ಪರಿಷತ್ ಸದಸ್ಯರ ಹೆಸರನ್ನು ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸೇರಿಸಲು ಹುನ್ನಾರ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್ ಅವರು ಇಲ್ಲಿ ಗಂಭೀರ ಆರೋಪ ಮಾಡಿದರು.
ಶನಿವಾರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಮಾಡುತ್ತಿದ್ದಾರೆ. ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಾದೇಶಿಕ ಆಯುಕ್ತರಿಗೆ, ಸಹಾಯಕ ಆಯುಕ್ತರಿಗೆ ಮತ್ತು ಪಾಲಿಕೆಯ ಆಯುಕ್ತರ ಮೇಲೆ ಸ್ವತ: ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ್ ಸವದಿಯವರು ಬಿದ್ದಾಪೂರ್ ಕಾಲೋನಿಯ ಮಹಾನಗರ ಪಾಲಿಕೆಯ ಸದಸ್ಯ ಶ್ರೀನಿವಾಸ್ ದೇಸಾಯಿ ಅವರ ಮನೆ ವಿಳಾಸ, ಸಾಯಬಣ್ಣ ತಳವಾರ್ ಅವರು ಬಿದ್ದಾಪೂರ್ ಕಾಲೋನಿಯಲ್ಲಿರುವ ಮಹಾನಗರ ಪಾಲಿಕೆಯ ಸದಸ್ಯ ರಾಜು ದೇವದುರ್ಗ ಅವರ ಮನೆಯ ವಿಳಾಸ, ಶ್ರೀಮತಿ ಭಾರತಿ ಶೆಟ್ಟಿ ಅವರು ಬಿದ್ದಾಪೂರ್ ಕಾಲೋನಿಯ ಶಾಂತಗೌಡ ಅವರ ಮನೆಯ ವಿಳಾಸ, ಲೇಹರಸಿಂಗ್ ಅವರು ಐವಾನ್ ಶಾಹಿ ಪ್ರದೇಶದಲ್ಲಿರುವ ಶಾಂತಗೌಡ ಅವರ ಮನೆಯ ವಿಳಾಸ, ಪ್ರತಾಪ್ ಸಿಂಗೆ ಅವರು ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಮಹಾವಿದ್ಯಾಲಯದ ಎದುರು ಇರುವ ಅಪಾರ್ಟ್‍ಮಂಟ್‍ನಲ್ಲಿನ ವಿಳಾಸ, ರಘುನಾಥ್ ಮಲ್ಕಾಪುರೆ ಹಾಗೂ ಮುನಿರಾಜು ಅವರು ವಿಠಲನಗರದಲ್ಲಿರುವ ನ್ಯಾಯವಾದಿ ವಿದ್ಯಾರಾಣಿ ಭಟ್ ಅವರ ಮನೆಯ ವಿಳಾಸವನ್ನು ನಮೂದಿಸಿ ಆನ್‍ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಅವರು ದೂರಿದರು.
ಎಲ್ಲ ಏಳು ಜನ ಬಿಜೆಪಿಯ ರಾಜ್ಯ ವಿಧಾನ ಪರಿಷತ್ ಸದಸ್ಯರಿಗೂ ಮಹಾನಗರ ಪಾಲಿಕೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಆದಾಗ್ಯೂ, ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಮೂಲಕ ಬಿಜೆಪಿ ಪಾಲಿಕೆಯಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬರಲು ಹುನ್ನಾರ ನಡೆಸಿದೆ. ಸ್ವತ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಮೇಲ್ವಿಚಾರಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಏಳು ಜನ ಪರಿಷತ್ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಹಣದ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡಲಾಗುತ್ತಿದೆ. ಇಲ್ಲವಾದಲ್ಲಿ ವರ್ಗಾವಣೆ ಮಾಡುವ ಬೆದರಿಕೆಯನ್ನೂ ಸಹ ಹಾಕಲಾಗುತ್ತಿದೆ. ಅದಕ್ಕೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಹೆದರಬಾರದು. ಒಂದು ವೇಳೆ ಹೆದರಿ ಬೋಗಸ್ ಮತದಾರರನ್ನು ಪಾಲಿಕೆಯ ಮತದಾರರ ಪಟ್ಟಿಯಲ್ಲಿ ಸೇರಿಸಿದರೆ ಮುಂದೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಖಂಡಿತವಾಗಿಯೂ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸುವುದು ಖಚಿತ ಎಂದು ಅವರು ಎಚ್ಚರಿಸಿದರು.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಹಾಗಾಗಿ ಏಳು ಜನ ಪರಿಷತ್ ಸದಸ್ಯರು ಮತದಾರರ ಪಟ್ಟಿಯಲ್ಲಿ ಸೇರಿಸಲು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅವರು ಕೊಟ್ಟ ಕೇರಾಫ್ ವಿಳಾಸವನ್ನು ಹುಡುಕಿಕೊಂಡು ಹೋದರೆ ಅವರ ಮನೆಗಳು ಕೀಲಿ ಹಾಕಿವೆ. ಅವರ ವಿಳಾಸದ ಪ್ರದೇಶದಲ್ಲಿ ಅವರ ಕುರಿತು ಅಕ್ಕ, ಪಕ್ಕದವರನ್ನು ವಿಚಾರಿಸಿದರೆ ಅವರಿಗೇನೂ ಗೊತ್ತಿಲ್ಲ. ಅವರ ದೂರವಾಣಿ ಸಂಖ್ಯೆಗಳೂ ಸಹ ಇಲ್ಲ. ಹಾಗಾಗಿ ಇಂತಹ ಬೋಗಸ್ ಮತದಾರರನ್ನು ಪಾಲಿಕೆಯ ಮತದಾರರ ಪಟ್ಟಿಯಲ್ಲಿ ಸೇರಿಸಬಾರದು ಎಂದು ಅವರು ಒತ್ತಾಯಿಸಿದರು.
ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯನ್ನು ಕೇಳಿದಾಗ ಮೂರು ದಿನಗಳ ನಂತರ ನಮಗೆ ನೀಡಿದ್ದಾರೆ. ಪಟ್ಟಿಯಲ್ಲಿ 63 ಮತದಾರರ ಹೆಸರುಗಳಿವೆ. ಅವರಲ್ಲಿ 55 ಜನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಇತರೆ 8 ಜನರ ಹೆಸರುಗಳು ಇವೆ. ಇತರೆ ಮತದಾರರ ಪಟ್ಟಿಯಲ್ಲಿ ರಾಜ್ಯಸಭೆಯ ಸದಸ್ಯ ಡಾ. ಮಲ್ಲಿಕಾರ್ಜುನ್ ಖರ್ಗೆ, ಸಂಸದ ಡಾ. ಉಮೇಶ್ ಜಾಧವ್, ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ, ಸುನೀಲ್ ವಲ್ಲ್ಯಾಪೂರೆ, ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರ ಹೆಸರುಗಳಿವೆ ಎಂದು ಅವರು ವಿವರಿಸಿದರು.
ಶಾಸಕ ಬಸವರಾಜ್ ಮತ್ತಿಮೂಡ್ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲ್ಯಾಪೂರೆ ಅವರ ನಿವಾಸಗಳು ನಗರದಲ್ಲಿವೆ. ಹಾಗಾಗಿ ಅವರ ಕುರಿತು ನಾವು ಯಾವುದೇ ರೀತಿಯಲ್ಲಿ ಆಕ್ಷೇಪಣೆ ಮಾಡುವುದಿಲ್ಲ. ಸಾಯಬಣ್ಣ ತಳವಾರ್ ಅವರೂ ಸೇರಿದಂತೆ ಏಳು ಜನ ಪರಿಷತ್ ಸದಸ್ಯರ ಹೆಸರುಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬೋಗಸ್ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಾರದು ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ಏನಾದರೂ ಅಕ್ರಮವಾಗಿ ಹೆಸರುಗಳನ್ನು ಸೇರಿಸಿದ್ದೇ ಆದಲ್ಲಿ ಅದು ಬಿಜೆಪಿಗೆ ಏನಾದರೂ ಗೆಲುವು ಆದರೆ ಅದು ತಾತ್ಕಾಲಿಕವಾಗಲಿದೆ. ಮುಂದೆ ಅದು ಅವರಿಗೆ ತಿರುಗುಬಾಣವಾಗಲಿದೆ ಎಂದು ಅವರು ಎಚ್ಚರಿಸಿದರು.
ರಾಜ್ಯ ಬಿಜೆಪಿ ಅಧಿಕಾರವು ಕೇವಲ ಇನ್ನೊಂದು ವರ್ಷ ಬಾಕಿ ಇದೆ. ಮುಂದೆ ಅಧಿಕಾರ ಕಳೆದುಕೊಳ್ಳಲಿದೆ. ಆದ್ದರಿಂದ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಆಡಳಿತ ಪಕ್ಷದ ಒತ್ತಡಕ್ಕೆ ಮಣಿಯಬಾರದು. ಒಂದು ವೇಳೆ ಪಕ್ಷಪಾತದಿಂದ ಕಾರ್ಯನಿರ್ವಹಿಸಿದ್ದೇ ಆದಲ್ಲಿ ಬದಲಾದ ಸರ್ಕಾರದಿಂದ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಮೇಯರ್‍ಗಳಾದ ಶರಣಕುಮಾರ್ ಮೋದಿ, ಸೈಯದ್ ಅಹ್ಮದ್, ಈರಣ್ಣ ಝಳಕಿ, ಡಾ. ಕಿರಣ್ ದೇಶಮುಖ್, ಜಗದೇವ್ ಗುತ್ತೇದಾರ್ ಕಾಳಗಿ, ಆದಿಲ್ ಮುಂತಾದವರು ಉಪಸ್ಥಿತರಿದ್ದರು.