ಪಾಲಿಕೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ, ಸಾಮಾಜಿಕ ಅಂತರವೇ ಮಾಯ..!

ಕಲಬುರಗಿ:ಏ.18:ದೀಪದ ಬುಡದಲ್ಲಿಯೇ ಕತ್ತಲು ಎನ್ನುವ ಹಾಗೆ ಮಾಸ್ಕ್ ಹಾಕದವರನ್ನು ಹುಡುಕಿ, ಹುಡುಕಿ ದಂಡ ಹಾಕುವ ಮಹಾನಗರ ಪಾಲಿಕೆಯ ಕಚೇರಿಯಲ್ಲಿಯೇ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಇಲ್ಲದೇ ಸರದಿ ಸಾಲಿನಲ್ಲಿ ಜನರು ನಿಂತು ಪಡಬಾರದ ಕಷ್ಟ ಪಡುತ್ತಿದ್ದರೆ, ಪರ್ಯಾಯ ಮಾರ್ಗ ಕಂಡುಕೊಂಡು ಜನದಟ್ಟಣೆ ತಪ್ಪಿಸುವಲ್ಲಿ ಪಾಲಿಕೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಏಪ್ರಿಲ್ ತಿಂಗಳಾಗಿದ್ದರಿಂದ ಆಸ್ತಿಯ ತೆರಿಗೆ ಕಟ್ಟಲು, ಅಂಗಡಿಯ ಪರವಾನಿಗೆ ನವೀಕರಣ ಸೇರಿದಂತೆ ಅನೇಕ ಕೆಲಸದ ನಿಮಿತ್ಯ ಮಹಾನಗರ ಪಾಲಿಕೆಗೆ ಸಮರೋಪಾದಿಯಲ್ಲಿ ಸಾರ್ವಜನಿಕರು ಬರುತ್ತಿದ್ದಾರೆ. ಸಾಲದ್ದಕ್ಕೆ ಸಾಮಾಜಿಕ ಅಂತರ ಇಲ್ಲದೇ ನೂಕು ನುಗ್ಗಲಿನಲ್ಲಿಯೇ ನಿಂತು ಕೆಲಸ ಮುಗಿಸಿಕೊಂಡು ಹೋಗಲು ಪರದಾಡುತ್ತಿದ್ದಾರೆ.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಅಗತ್ಯ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎನ್ನುತ್ತಲೇ ಜನರಿಗೆ ದಂಡ ಹಾಕಿದ ಮಹಾನಗರ ಪಾಲಿಕೆ ತನ್ನ ಕಚೇರಿಯಲ್ಲಿಯೇ ಜನದಟ್ಟಣೆ ಆಗುತ್ತಿದ್ದರೂ ಅದನ್ನು ತಪ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಪಾಲಿಕೆ, ತನ್ನ ಕಚೇರಿಯಲ್ಲಿಯೇ ಆಗುವ ಅವಘಡ ತಪ್ಪಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಏಪ್ರಿಲ್ ತಿಂಗಳಾಗಿದ್ದರಿಂದ ಮಹಾನಗರ ಪಾಲಿಕೆಗೆ ಹಲವು ಕೆಲಸ ಹೊತ್ತು ಜನ ಬರುವುದು ಸಾಮಾನ್ಯ. ಇನ್ನೊಂದೆಡೆ ಬಿಸಿಲಿನ ಕಾರಣಕ್ಕೆ ಸರ್ಕಾರಿ ಕಚೇರಿಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಜನದಟ್ಟಣೆಯಾಗುತ್ತಿದೆ. ಕೋವಿಡ್ 2ನೇ ಅಲೆ ಅಬ್ಬರಿಸುತ್ತಿರುವುದರಿಂದ ಜನದಟ್ಟಣೆ ತಪ್ಪಿಸಲು ಮಹಾನಗರ ಪಾಲಿಕೆಯು ಹೆಚ್ಚು ಕೌಂಟರ್ ಆರಂಭಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಕ್ಕೆ ಪಾಲಿಕೆ ಆಯುಕ್ತರು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.