ಪಾಲಕರೇ ಮಕ್ಕಳಿಗೆ ಆದರ್ಶವಾಗಬೇಕು

ರಾಯಚೂರು,ಫೆ.೨೨- ತಂದೆ ತಾಯಿಯೇ ಮಕ್ಕಳ ಪ್ರಥಮ ಗುರು, ಮನೆಯೇ ಮೊದಲ ಪಾಠ ಶಾಲೆಯಾಗಿರುವುದರಿಂದ ಪಾಲಕರು ಮಕ್ಕಳ ಮುಂದೆ ಸಂಸ್ಕಾರದಿಂದ ವರ್ತಿಸಿ ಮಕ್ಕಳಿಗೆ ಮಾದರಿಯಾಗಬೇಕು ಆದರ್ಶವಾಗಬೇಕು ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಮಂಗಳವಾರದಂದು ಸಿರಿವಾರದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ವಾರ್ಷಿಕೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ, ಸಕಾರಾತ್ಮಕ ಭಾವನೆಗಳನ್ನು ಬೆಳೆಸಿ, ಇತರ ಮಕ್ಕಳೊಂದಿಗೆ ಹೋಲಿಸಿ ಅವರನ್ನು ಕುಬ್ಜರನ್ನಾಗಿಸಬೇಡಿ,ಪಾಲಕರು ತಮ್ಮ ಪ್ರತಿಷ್ಠೆಗಾಗಿ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ, ಇಷ್ಟೇ ಅಂಕ ತೆಗೆದುಕೊಳ್ಳಬೇಕು ಎಂದು ಅತಿಯಾದ ಒತ್ತಡ ಹಾಕಬೇಡಿ ನೀವು ಮಾನಸಿಕ ವೇದನೆ ಅನುಭವಿಸಬೇಡಿ.
ಎಲ್ಲಾ ಪರೀಕ್ಷೆಗಳಿಗಿಂತ ಜೀವನ ಪರೀಕ್ಷೆ ದೊಡ್ಡದು ಅಲ್ಲಿ ನಮ್ಮ ಮಕ್ಕಳು ಪಾಸಾಗಬೇಕಾದರೆ ಲೋಕಜ್ಞಾನ, ವ್ಯವಹಾರ ಜ್ಞಾನ ಮಕ್ಕಳಿಗೆ ಹೆತ್ತವರು ಒದಗಿಸಬೇಕು ಎಂದು ಯಾಳಗಿ ಅವರು ಹೇಳಿದರು.
ಕಾರ್ಯಕ್ರಮವನ್ನು ಕಲ್ಲೂರು ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಮಹಮ್ಮದ್ ಪೀರಾನ್ ಉದ್ಘಾಟಿಸಿದರು. ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ರಾಮಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಕಲ್ಲೂರು ಸಿಆರ್‌ಪಿ ಪ್ರಶಾಂತ, ವಸತಿ ಶಾಲೆಯ ಕಟ್ಟಡ ಮಾಲಿಕರಾದ ಶಿವಬಸ್ಸಣ್ಣ ಸಾಹುಕಾರ, ಪಾಲಕರ ಪ್ರತಿನಿಧಿ ಸುರೇಶ ಹೀರಾ, ಪತ್ರಕರ್ತ ರಾಜುಗಿಂಡಿ ಇನ್ನಿತರರು ಇದ್ದರು.
ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ,
ಆದರ್ಶ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು.