ಪಾಲಕರಿಂದ ಅನುಮತಿ ಪಡೆದು ಮಕ್ಕಳಿಗೆ ಮೊಟ್ಟೆ ವಿತರಿಸಿ:ಪಾಟೀಲ

ಭಾಲ್ಕಿ:ನ.28: ಅಕ್ಷರ ದಾಸೋಹ ಯೋಜನೆಯಲ್ಲಿ, ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು ಮತ್ತು ವಿಜಯಾಪುರ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಮಕ್ಕಳಿಗ ಪೌಷ್ಠಿಕಾಂಶ ಒದಗಿಸುವ ನಿಟ್ಟಿನಲ್ಲಿ, ಪ್ರತಿ ಮಗುವಿಗೆ ಮೊಟ್ಟೆ, ಮೊಟ್ಟೆ ತಿನ್ನದ ಮಗುವಿಗೆ ಬಾಳೆ ಹಣ್ಣು ವಿತರಿಸಲು ಸರ್ಕಾರ ನಿರ್ಧರಿಸಿದೆ. ಕಾರಣ ಶಿಕ್ಷಕರು ಎಲ್ಲಾ ಮಕ್ಕಳ ಪಾಲಕರ ಹತ್ತಿರ ತಮ್ಮ ಮ್ಮಕಳು ಮೊಟ್ಟೆ ಅಥವಾ ಬಾಳೆ ಹಣ್ಣು ತಿನ್ನುವ ಬಗ್ಗೆ ಅನುಮತಿ ಪತ್ರ ಪಡೆದು ಮೊಟ್ಟೆ ವಿತರಿಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಅಕ್ಷರ ದಾಸೋಹ ಯೋಜನೆಯ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣಾ ಪೂರ್ವ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮೊಟ್ಟೆ ಖರೀದಿ ಮತ್ತು ವಿತರಣೆಗಾಗಿ ಶಾಲಾ ಹಂತದಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಿ ಕಾರ್ಯನಿರ್ವಹಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು. ಅನುದಾನಿತ ಶಾಲೆಗಳಲ್ಲಿ ಸಂಸ್ಥೆಯ ಅಧ್ಯಕ್ಷರು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಬೇಕು. ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಕಾರ್ಯದರ್ಶಿಗಳಾಗಿ ಕೆಲಸ ನಿರ್ವಹಿಸಿ, ಅಕ್ಷರ ದಾಸೊಹ ಯೋಜನೆಯ ಮಹತ್ವಾಕಾಂಕ್ಷಿ ಯೋಜನೆಯಾದ ಪೌಷ್ಠಿಕಾಂಶದ ಮೊಟ್ಟೆ/ಬಾಳೆಹಣ್ಣು ಕೊಡುವ ಕಾರ್ಯ ಕಟ್ಟುನಿಟ್ಟಾಗಿ ಮಾಡಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾಯ ಹರನಾಳ, ಮೊಟ್ಟೆ ಮತ್ತು ಬಾಳೆಹಣ್ಣುಗಳು ದಾಖಲಾತಿಗೆ ಅನುಗುಣವಾಗಿ ಖರೀದಿಸುವ ಅವಶ್ಯಕತೆ ಇಲ್ಲ. ಮಕ್ಕಳ ಹಾಜರಾತಿಗೆ ಅನುಗುಣವಾಗಿ ಮೊಟ್ಟೆ/ಬಾಳೆಹಣ್ಣುಗಳನ್ನು ಖರೀದಿಸಿ, ಎಲ್ಲಾ ಮಕ್ಕಳಿಗು ವಿತರಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಇ.ಸಿ.ಓ ಸಹದೇವ.ಜಿ ಯವರು ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವ ಸಿದ್ಧತೆಯ ಬಗ್ಗೆ ಮಾಹಿತಿ ನೀಡಿದರು. ಇ.ಸಿ.ಓ ಜಯರಾಮ ಬಿರಾದಾರ ಉಚಿತ ಪಠ್ಯ ಪುಸ್ತಕಗಳ ಮಾಹಿತಿಯನ್ನು ಎಸ್‍ಎಟಿಎಸ್‍ನಲ್ಲಿ ಭರ್ತಿಮಾಡುವ ಬಗ್ಗೆ ಮಾತನಾಡಿದರು. ಬಿಆರ್‍ಪಿ ಶಕುಂತಲಾ ಸಾಲಮನಿ ನಿಷ್ಟಾ ತರಬೇತಿ ಸೇರಿದಂತೆ ಇತರೆ ತರಬೇತಿಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಬಸವರಾಜ ಪಕ್ಕಾ, ಚಂದ್ರಕಾಂತ ಖಂಡಾಳೆ, ಅನೀಲ ಗಾಯಕವಾಡ, ಶ್ರೀಕಾಂತ ಮೂಲಗೆ, ಗುರಯ್ಯಾ ಸ್ವಾಮಿ ಉಪಸ್ಥಿತರಿದ್ದರು.
ಶಾಂತಾ ಸಜ್ಜನ ಸ್ವಾಗತಿಸಿದರು. ಸೈಬಣ್ಣಾ ನಾಲವಾರ ನಿರೂಪಿಸಿದರು. ತುಕಾರಾಮ ಗಣೇಶ ವಂದಿಸಿದರು.