ಪಾರ್ಥ ಕರೆ ಸ್ವೀಕರಿಸದ ಮಮತಾ

ಕೋಲ್ಕತ್ತಾ,ಜು.೨೫- ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಾಲ್ಕು ಬಾರಿ ಕರೆ ಮಾಡಿದರೂ ಕರೆ ಸ್ವೀಕಾರ ಮಾಡಿಲ್ಲ ಎನ್ನುವ ಸಂಗತಿ ಬಯಲಾಗಿದೆ.

ಪ್ರಕ್ರಿಯೆಯ ಪ್ರಕಾರ, ಒಬ್ಬ ವ್ಯಕ್ತಿ ಬಂಧನವಾದಾಗ ಕುಟುಂಬದ ಸದಸ್ಯರು ಅಥವಾ ಸಂಬಂಧಿಕರು ಅಥವಾ ಸ್ನೇಹಿತರಲ್ಲಿ ಒಬ್ಬ ವ್ಯಕ್ತಿಗೆ ತಿಳಿಸಲು ಅವಕಾಶವಿದೆ.

ಈ ಹಿನ್ನೆಲೆಯಲ್ಲಿ ಸಚಿವ ಪಾರ್ಥ ಚಟರ್ಜಿ ಅವರು ಬಂಧನದ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಿಳಿಸುವುದಾಗಿ ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅದರಂತೆ ನಾಲ್ಕು ಬಾರಿ ಕರೆ ಮಾಡಿದ್ದರೂ ಮುಖ್ಯಮಂತ್ರಿಗಳು ಕರೆ ಸ್ವೀಕಾರ ಮಾಡಿಲ್ಲ ಎನ್ನಲಾಗಿದೆ.

ಪಾರ್ಥ ಚಟರ್ಜಿ ಬಂಧನ:
ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಮತ್ತು ಟಿಎಂಸಿ ಹಿರಿಯ ನಾಯಕ ಪಾರ್ಥ ಚಟರ್ಜಿ ಅವರನು ಶಾಲಾ ಉದ್ಯೋಗ ಹಗರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಬಂಧಿಸಿದೆ.

ಮಾಜಿ ಶಿಕ್ಷಣ ಸಚಿವರ ಆಪ್ತ ಸಹಾಯಕ ಅರ್ಪಿತಾ ಮುಖರ್ಜಿ ಅವರ ಕೋಲ್ಕತ್ತಾದ ನಿವಾಸದಿಂದ ೨೧ ಕೋಟಿ ರೂಪಾಯಿ ನಗದು ವಶಪಡಿಸಿಕೊಂಡ ನಂತರ, ಈ ಬಂಧನ ನಡೆದಿತ್ತು.