ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧ ಕೋರಿದ 5 ತಿಂಗಳ ಕೂಸು

ಬೆಂಗಳೂರು, ಡಿ.24- ರಾಜಧಾನಿ ಬೆಂಗಳೂರಿನ ಕಬ್ಬನ್ ಪಾರ್ಕ್ ಒಳಗಡೆ ವಾಹನಗಳ ಸಂಚಾರ ನಿಷೇಧಿಸುವಂತೆ ಕೋರಿ 5 ತಿಂಗಳ ಮಗುವಿನ ಪರವಾಗಿ ಸಲ್ಲಿಸಿದ್ದ ಪಿಐಎಲ್ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಪಾರ್ಕ್ ಒಳಗೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ನಗರದ 5 ತಿಂಗಳ ಮಗುವಿನ ಪರವಾಗಿ ವಕೀಲರಾದ ಅಂಜನ್ ದೇವ್ ನಾರಾಯಣ ಹಾಗೂ ಅನ್ನಪೂರ್ಣ ಸೀತಾರಾಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಂಚಾರ ವಿಭಾಗದ ಹೆಚ್ಚುವರಿ ನಗರ ಪೊಲೀಸ್ ಆಯುಕ್ತ ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.

ತಾನು ಹಲವು ದಿನಗಳಿಂದ ಪೋಷಕರ ಜೊತೆ ಕಬ್ಬನ್ ಪಾರ್ಕ್‌ಗೆ ವಿಹಾರಕ್ಕೆ ಬರುತ್ತಿದ್ದೇನೆ.ಆದರೆ, ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರದಿಂದಾಗಿ ಕಾರ್ಬನ್ ಡೈಯಾಕ್ಸೈಡ್ ಹೆಚ್ಚಾಗಿದೆ. ಇದರಿಂದಾಗಿ ತನ್ನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗೆಯೇ, ಮಾಲಿನ್ಯ ರಹಿತ ವಾತಾವರಣದಲ್ಲಿ ಆರೋಗ್ಯಯುತವಾಗಿ ಜೀವಿಸುವ ತನ್ನ ಸಂವಿಧಾನಬದ್ಧ ಹಕ್ಕು ಉಲ್ಲಂಘನೆಯಾಗುತ್ತಿದೆ.

ಹೀಗಾಗಿ, ಪಾರ್ಕ್ ಒಳಗೆ ವಾಹನ ಸಂಚಾರ ನಿಷೇಧಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಮಗುವಿನ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.