ಪಾರಾಯಣ ಸಂಘದಿಂದ ಸಿರನೂರಕರ್ ಅವರಿಗೆ ಸನ್ಮಾನ

ಕಲಬುರಗಿ:ಮಾ.13: ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರ ಸ್ವಾಮಿಗಳ ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕ ದಿನ ಹಾಗೂ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜನ್ಮದಿನದ ಅಂಗವಾಗಿ ಹಂಸನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದ ವತಿಯಿಂದ ಕಲಬುರಗಿಯ ಓಜಾ ಬಡಾವಣೆಯ ಶ್ರೀ ವೆಂಕಟೇಶ ಕುಲಕರ್ಣಿ ಎಲ್ಹೇರಿ ಅವರ ನಿವಾಸದಲ್ಲಿ ಬುಧವಾರ ನಡೆದ ವಿಷ್ಣು ಸಹಸ್ರನಾಮ ವಿಶೇಷ ಪಾರಾಯಣದ ಸಂದರ್ಭದಲ್ಲಿ ಪತ್ರಕರ್ತ, ಸಾಹಿತಿ ಹಾಗೂ ಅಂಕಣಕಾರರಾದ ಶ್ರೀನಿವಾಸ ಸಿರನೂರಕರ್ ಅವರನ್ನು ಸನ್ಮಾನಿಸಲಾಯಿತು.
ಸಿರನೂರಕರ್ ಅವರು ರಚಿಸಿದ “ಯಾಜ್ಞವಲ್ಕ್ಯ ಸ್ಮ್ರತಿ: ಅಂದು -ಇಂದು-ಎಂದೆಂದೂ” ಕೃತಿಗಾಗಿ ಸಂಘದ ಪರವಾಗಿ ಜಗನ್ನಾಥ ಆಚಾರ್ಯ ಸಗರ ಮತ್ತು ಡಾ. ಕೃಷ್ಣ ಕಾಕಲವಾರ್ ಅವರು ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿರನೂರಕರ್ ಅವರು ಸನಾತನ ಭಾರತದ ಅತ್ಯಂತ ಪ್ರಾಚೀನ ಋಷಿಗಳಾದ ಯೋಗೀಶ ಯಾಜ್ಞವಲ್ಕ್ಯರು ರಚಿಸಿದ ಸ್ಮೃತಿ ಸರ್ವಕಾಲಕ್ಕೂ ಸಲ್ಲುವಂತಹುದ್ದಾಗಿದ್ದು ಅವರ ಪ್ರಖರ ವೈಚಾರಿಕತೆ ಹಾಗೂ ವೈಜ್ಞಾನಿಕತೆ ಬೆರಗುಗೊಳಿಸುವಂತಹುದಾಗಿದೆ ಎಂದು ಹೇಳಿದರು.
ಪದ್ಮನಾಭಾಚಾರ್, ರವಿ ಲಾತೂರಕರ್, ಇತರರು ಉಪಸ್ಥಿತರಿದ್ದರು.