ಪಾರಾಯಣ ಸಂಘದಿಂದ ವಿಜಯದಾಸರ ಆರಾಧನೆ

ಕಲಬುರಗಿ ನ 3: ಇಲ್ಲಿನ ಜಯತೀರ್ಥ ನಗರದ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ಇಂದು ಹಂಸ ನಾಮಕ ಮತ್ತು ಲಕ್ಷ್ಮೀ ನಾರಾಯಣ ಪಾರಾಯಣ ಸಂಘದ ವತಿಯಿಂದ ಶ್ರೀವಿಜಯದಾಸರ ಆರಾಧನೆ ನಿಮಿತ್ಯ ವಿಷ್ಣುಸಹಸ್ರನಾಮ ಮತ್ತು ವಿಜಯರಾಯರ ಕವಚವನ್ನು 11 ಬಾರಿ ಪಠಿಸಲಾಯಿತು.ನಂತರ ಪಾರಾಯಣ ಸಂಘದ ಕಾರ್ಯದರ್ಶಿ ವಿನುತ ಜೋಷಿ ವಿಜಯದಾಸರ ಕುರಿತು ಉಪನ್ಯಾಸ ನೀಡಿದರು. ಶ್ರೀವಿಜಯದಾಸರು ನಾಲ್ಕು ಯುಗಗಳಲ್ಲಿ ಅವತರಿಸಿದಂತಹ ಮಹಾಮಹಿಮರು, ಸತ್ಯಯುಗದಲ್ಲಿ ಭೃಗು ಋಷಿಗಳಾಗಿ, ತ್ರೇತಾಯುಗದಲ್ಲಿ ಸುರಲಿಲ್ಲ ಎನ್ನುವ ಕಪಿಯಾಗಿ ಶ್ರೀರಾಮಚಂದ್ರ ದೇವರಿಗೆ ಸೀತಾನ್ವೇಷಣೆಯಲ್ಲಿ ಸೇತುವೆ ಕಟ್ಟುವ ಮೂಲಕ ಸಹಾಯ ಮಾಡುತ್ತಾರೆ, ದ್ವಾಪರ ಯುಗದಲ್ಲಿ ಸಿರುಕುಂಪ ಎನ್ನುವ ಯಾದವನಾಗಿ ಅವತರಿಸಿ ಭಗವಂತ ಸೇವೆ ಮಾಡುತ್ತಾರೆ. ಕಲಿಯುಗದಲ್ಲಿ ಮೊದಲಿಗೆ ಪುರಂದರದಾಸರ ಮನೆಯಲ್ಲಿ ಆಕಳ ಕರುವಾಗಿ ಅವತರಿಸಿ ಅನಂತರ ಅವರ ಪುತ್ರ ಮಧ್ವರಾಗಿ ಜನಿಸುತ್ತಾರೆ.ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಚಿಕಲಪರವಿ ಎನ್ನುವ ಗ್ರಾಮದಲ್ಲಿ 16ನೇ ಶತಮಾನದಲ್ಲಿ ಬಡತನದ ಕುಟುಂಬದಲ್ಲಿ ಜನಿಸಿ ಭಗವಂತನ ಅನನ್ಯ ಸೇವೆಗೈದವರು. ಸಂಜೆವರೆಗೂ ಇದ್ದರೂ ಸೌಟು ಗಂಜಿ ಸಿಗದೇ ಬಳಲಿದೆನು ಎಂದು ಬಡತನವನ್ನು ವಿವರಿಸುತ್ತಾರೆ.ಹಲವಾರು ಬಾರಿ ಕಾಶಿ ಯಾತ್ರೆ ಮಾಡುತ್ತಾರೆ. ಒಮ್ಮೆ ಕಾಶಿ ಕ್ಷೇತ್ರದಲ್ಲಿ ವಾಸವಾಗಿದ್ದಾಗ ಕನಸಿನಲ್ಲಿ ಪುರಂದರದಾಸರು ಬಂದು ವ್ಯಾಸ ಕ್ಷೇತ್ರಕ್ಕೆ ಕರೆದು ವೇದವ್ಯಾಸರ ದರುಶನ ಮಾಡಿಸಿ ಅನುಗ್ರಹ ಕೊಡಿಸುತ್ತಾರೆ. ತಂಬೂರಿಯನ್ನು ನೀಡಿ, “ವಿಜಯವಿಠಲ” ಎಂಬ ಅಂಕಿತವನ್ನು ಕೊಟ್ಟು ಅನುಗ್ರಹಿಸುತ್ತಾರೆ, ಬೆಳಿಗ್ಗೆ ಎದ್ದಾಗ ಕನಸಿನಲ್ಲಿ ನಡೆದ ಪ್ರಸಂಗಗಳು ವಾಸ್ತವವಾಗುತ್ತವೆ .ಕನಸಿನಲ್ಲಿ ಕಂಡ ತಂಬೂರಿ ಅವರ ಮುಂದೆ ಪ್ರತ್ಯಕ್ಷವಾಗಿರುತ್ತದೆ.ತಮ್ಮ ಶಿಷ್ಯರಾದ ಮೋಹನದಾಸರು, ಗೋಪಾಲದಾಸರು, ಜಗನ್ನಾಥದಾಸರಿಗೆ ತಮ್ಮ ಜ್ಞಾನವನ್ನು ದಾಸ ಸಾಹಿತ್ಯವನ್ನು ಧಾರೆ ಎರೆಯುತ್ತಾರೆ ಎಂದು ವಿಜಯದಾಸರ ಬಗ್ಗೆ ಸಂಕ್ಷಿಪ್ತ ಹೇಳಿದರು.ರವಿ ಲಾತೂರಕರ್,ಅಪ್ಪಾ ರಾವ ಟಕ್ಕಳಕಿ,ಸುಬ್ಬರಾವ್,ಪ್ರಾಣೇಶ್ ಮೂಜುಂದಾರ್ ,ವಿಜಯ ಕುಮಾರ್ ಕುಲ್ಕರ್ಣಿ, ಅನಿಲ್ ಕುಲ್ಕರ್ಣಿ,ಸುರೇಶ್ ಕುಲ್ಕರ್ಣಿ,ಆರ್ ಕೆ ಕುಲ್ಕರ್ಣಿ,ರಾಮಾಚಾರ್ಯ,ರಂಗರಾವ್,ನರಸಿಂಗರಾವ್,ಅನಿರುದ್ಧ, ವಿಶ್ವಾಸ್ ,ಪ್ರಸನ್ನ , ಗುಂಡೆರಾವ್,ಜಯತೀರ್ಥ ಶರ್ಮಾ ಉಪಸ್ಥಿತರಿದ್ದರು.