ಪಾರದರ್ಶಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕಲಬುರಗಿಯಿಂದ ದೆಹಲಿಗೆ ದ್ವಿಚಕ್ರವಾಹನದ ಮೇಲೆ ಹೊರಟ ಯುವಕ: ಜಂತರ್ ಮಂತರ್‍ನಲ್ಲಿ ಧರಣಿ

ಕಲಬುರಗಿ:ಡಿ.08:ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಇದು ಇಡೀ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಾಗಿ ಇಡೀ ದೇಶಾದ್ಯಂತ ಸಿಇಟಿ ಪರೀಕ್ಷೆಯಲ್ಲಿ ಪಾರದರ್ಶಕ ಕಾಯ್ದುಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ದೆಹಲಿಯ ಜಂತರ್ ಮಂತರ್‍ನಲ್ಲಿ ಏಳು ದಿನಗಳ ಕಾಲ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಫರತಾಬಾದ್ ಗ್ರಾಮದ ಯುವಕ ವಿಮಲಕುಮಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಟಿವಿಎಸ್ ಎಕ್ಸೆಲ್ ಮೂಲಕವೇ ದೆಹಲಿಗೆ ಹೋಗುವೆ. ಈ ಮೊದಲು ಇದೇ ದ್ವಿಚಕ್ರವಾಹನವನ್ಜು ಮಹಿಳೆಯರ ಸೌಂದರ್ಯವರ್ಧಕ ಆಭರಣಗಳನ್ನು ಮಾರಾಟ ಮಾಡುವ ಮೂಲಕ ಬಳಕೆ ಮಾಡಿಕೊಳ್ಳುತ್ತಿದ್ದೆ. ಈಗ ಅದೇ ದ್ವಿಚಕ್ರವಾಹನದಲ್ಲಿ ಆಭರಣಗಳನ್ನು ಇಡುವ ಡಬ್ಬಾವನ್ನು ನನ್ನ ಅಡಿಗೆ ಸಾಮಗ್ರಿಗಳು ಹಾಗೂ ಬಟ್ಟೆ, ಬರೆಗಳನ್ನು ಇಡಲು ಉಪಯೋಗ ಮಾಡುವೆ. ಬೆಳಗಿನಿಂದ ರಾತ್ರಿವರೆಗೂ ಸಂಚಾರ ಮಾಡಲಿದ್ದು, ಕತ್ತಲಾದ ಸ್ಥಳದಲ್ಲಿಯೇ ವಾಸ್ತವ್ಯ ಮಾಡುವೆ. ಅದೂ ಅಲ್ಲದೇ ಯಾರ ನೆರವೂ ಇಲ್ಲದೇ ನಾನೇ ಈ ಮೊದಲು ಕೋವಿಡ್ ಸಂದರ್ಭದಲ್ಲಿ ಸಂಪಾದಿಸಿದ ಹಣವನ್ನು ದೆಹಲಿ ದ್ವಿಚಕ್ರವಾಹನದ ಯಾತ್ರೆ ಹಾಗೂ ಧರಣಿಗೆ ಬಳಸುವುದಾಗಿ ತಿಳಿಸಿದರು.
ನನ್ನ ತಂದೆ ದೇಶಾಂತರ ಹೋಗಿದ್ದಾರೆ. ತಾಯಿ ಇದ್ದು, ಆಕೆಯನ್ನು ತನ್ನ ತಮ್ಮ ನೋಡಿಕೊಳ್ಳುತ್ತಾನೆ ಎಂದು ಹೇಳಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಮ್ಮಿಕೊಳ್ಳುವ ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ ನಡೆದರೆ ಇಡೀ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.
ಡಿಸೆಂಬರ್ 9ರಂದು ಅಂತಾರಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವಾಗಿರುವುದರಿಂದ ಶನಿವಾರದಿಂದಲೇ ದೆಹಲಿಯಾತ್ರೆ ಕೈಗೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾರದರ್ಶಕತೆ ಮೂಡಿಸುವ, ವಿದ್ಯಾರ್ಥಿಗಳ ಹಿತ ಬಯಸುವ ಕಾರ್ಯ ಮಾಡುವೆ. ಹೋರಾಟ ಕೇವಲ ರಾಜ್ಯಕ್ಕೆ ಸೀಮಿತವಾಗಿರದೆ ಪ್ರಯಾಣದ ವೇಳೆ ತಲುಪುವ ಊರುಗಳಲ್ಲಿ ಸಾಧ್ಯವಾದಷ್ಟು ಜನರಿಗೆ ಸಮಸ್ಯೆ ಕುರಿತು ಚರ್ಚಿಸಿ ಸಾಮೂಹಿಕ ಹೋರಾಟಕ್ಕೆ ಅಣಿಯಾಗುವ ನಿಟ್ಟಿನಲ್ಲಿ ಸಾರ್ವಜನಿಕರ, ಯುವಕರ ಬೆಂಬಲ ಕೇಳಲಾಗುವುದು ಎಂದು ಅವರು ಹೇಳಿದರು.
ರಾಜ್ಯದಲ್ಲಿ ನಡೆದ ಪಿಎಸ್‍ಐ ಮತ್ತು ಎಫ್‍ಡಿಎ ಪರೀಕ್ಷಾ ಹಗರಣ ಸೇರಿದಂತೆ ಮಧ್ಯಪ್ರದೇಶದಲ್ಲಿನ ಹಳೆಯ ವ್ಯಾಪಂ ಹಾಗೂ ಇದೇ ವರ್ಷ ನಡೆದ ಪಟವಾರಿ ಪರೀಕ್ಷೆ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಆ ನಿಟ್ಟಿನಲ್ಲಿ ದೇಶದ ಯುವಕ-ಯುವತಿಯರ ಭವಿಷ್ಯ ನಿರ್ಧರಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಈ ರೀತಿಯ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸದ್ಯಕ್ಕೆ ನಾನೊಬ್ಬನೇ ಹೋರಾಟ ಆರಂಭ ಮಾಡಿದ್ದು, ಸ್ವಂತ ದುಡಿದ ಹಣದಿಂದಲೇ ಈ ಆಂದೋಲನ ಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಹಾಗೂ ಬೆಂಬಲವು ಅಗತ್ಯವಾಗಿದೆ. ಹೀಗಾಗಿ ದೇಶವ್ಯಾಪಿ ಸಂಚರಿಸಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಜನರನ್ನು ಸಜ್ಜುಗೊಳಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಡಿಪ್ಲೋಮಾ ಪದವೀಧರನಾಗಿದ್ದು, ಮೊದಲು ಚಿಕ್ಕ ವ್ಯಾಪಾರ ಮಾಡುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ನಾನೇ ಬರೆದ ಸಣ್ಣ, ಸಣ್ಣ ಪುಸ್ತಕಗಳ ಮಾರಾಟದಿಂದ ಬಂದ ಲಾಭದ ಹಣವನ್ನು ಇಂತಹ ಕೆಲಸಕ್ಕೆ ಬಳಸುವೆ. ಆ ಮೂಲಕ ಯುವಕರಲ್ಲಿ ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸುವೆ ಎಂದು ಅವರು ಹೇಳಿದರು.
ದೆಹಲಿಯ ಜಂತರ್ ಮಂತರ್‍ನಲ್ಲಿ ಧರಣಿ ಮಾಡುವುದಕ್ಕೆ ಅನುಮತಿ ಪಡೆಯಲಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಮಲಕುಮಾರ್ ಅವರು, ನಾನು ಅನುಮತಿ ಪಡೆದಿಲ್ಲ. ಇಲ್ಲಿಂದ ದೆಹಲಿಗೆ ರೈಲು, ವಿಮಾನದ ಮೂಲಕವೂ ಹೋಗುತ್ತಿಲ್ಲ. ಬದಲಾಗಿ ನಾನು ನಿತ್ಯ ಬಳಸುವ ಟಿವಿಎಸ್ ಎಕ್ಸೆಲ್ ಮೂಲಕವೇ ಪ್ರಯಾಣ ಮಾಡುವೆ. ಅಲ್ಲಿ ಏಳು ದಿನಗಳ ಕಾಲ ಧರಣಿ ಮಾಡಿ, ಪ್ರಧಾನಿಗೆ ಮನವಿ ಪತ್ರ ಸಲ್ಲಿಸುವೆ. ಅಲ್ಲದೇ ಈಗಾಗಲೇ ಅಂಚೆ ಮೂಲಕ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಹಾಗೂ ಪ್ರಧಾನಿಗೂ ಸಹ ಈ ಕುರಿತು ಪತ್ರ ಬರೆದಿರುವೆ. ಆ ಕುರಿತು ಪ್ರತಿಕ್ರಿಯೆ ಬಂದರೆ ಮುಂದಿನ ಕ್ರಮ ವಹಿಸುವೆ ಎಂದು ತಿಳಿಸಿದರು.
ದ್ವಿಚಕ್ರವಾಹನದ ಮುಂದಿನ ಚಕ್ರದ ಟೈರ್ ಹಳತಾಗಿದ್ದು, ದೆಹಲಿಗೆ ಹೋಗುವುದರಲ್ಲಿ ಟೈರ್ ಒಡೆಯುವ ಭೀತಿಯಿದೆ ಎಂದು ಮಾಧ್ಯಮದವರು ಹೇಳಿದಾಗ, ಹೊಸ ಟೈರ್ ಹಾಕಿಸುವುದಾಗಿಯೂ ಹೇಳಿದರು.