ಪಾರದರ್ಶಕ, ನ್ಯಾಯಸಮ್ಮತ ಚುನಾವಣೆ – ಡಿಸಿ

ರಾಯಚೂರು,ಮಾ.೨೪- ಜಿಲ್ಲೆಯ ಮಸ್ಕಿ ವಿಧಾನಸಭೆ ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಿದ್ದು, ಚುನಾವಣಾ ಆಯೋಗದ ನಿರ್ದೇಶಗಳನ್ವಯ ಚುನಾವಣೆ ಪಾರದರ್ಶಕ ಹಾಗೂ ಸೂಸುತ್ರವಾಗಿ ಜರುಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಮಾ.೨೩ರ ಮಂಗಳವಾರ ಮಸ್ಕಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ಸಿದ್ದತೆ ಕುರಿತು ಕೈಗೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ವೀಕ್ಷಕರು ಆಗಮಿಸಿದ್ದಾಗ ಅವರಿಗೆ ಮಸ್ಕಿ ವಿಧಾನಸಭೆ ಕ್ಷೇತ್ರದ ವರನಬಲ್ ಹಾಗೂ ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಸಂಪೂರ್ಣ ಮಾಹಿತಿ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ಹಂತದಲ್ಲಿ ಸಭೆಗಳನ್ನು ಹಮ್ಮಿಕೊಳ್ಳಬೇಕು. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಬೇಕು.
ಸಂಪೂರ್ಣವಾಗಿ ಆಯುಧಗಳ ಠೇವಣೆಯನ್ನು ಮಾಡಬೇಕು. ವಿನಾಯತಿ ಪಡೆದವರನ್ನು ಹೊರತುಪಡಿಸಿ ಆಯುಧ ಹೊಂದಿದವರು ಎಲ್ಲರು ಕಡ್ಡಾಯವಾಗಿ ಅವುಗಳನ್ನು ಸ್ಥಳೀಯ ಠಾಣೆಯಲ್ಲಿ ಠೇವಣೆ ಮಾಡಬೇಕು. ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್ ಪ್ರಾರಂಭಿಸಬೇಕು. ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು ಹಾಗೂ ಅಲ್ಲಿ ಸೂಕ್ತವಾಗಿ ತಪಾಸಣೆ ನಡೆಸಬೇಕು. ಅಂತರರಾಜ್ಯ ಗಡಿ ಭಾಗದಲ್ಲಿಯೂ ಚೆಕ್‌ಪೋಸ್ಟ್ ಸೂಕ್ತ ತಪಾಸಣೆ ಮಾಡಬೇಕು ಮತ್ತು ಕೋವಿಡ್ ತಪಾಸಣೆ ತಂಡ ಅಲ್ಲಿರಬೇಕು.
ಜಾಗೃತ ದಳದವರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ ಚುನಾವಣೆ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಲೆಕ್ಕದ ವಿವರಗಳನ್ನು ಅವರ ಖಾತೆಗೆ ಸಲ್ಲಿಸಬೇಕು ಎಂದು ಹೇಳಿದರು. ಕಣ್ಣು ತಪ್ಪಿನಿಂದ ಯಾವುದೇ ಪ್ರಮಾದ ಆಗಬಾರದು ಚುನಾವಣೆ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಲಿದ್ದು, ಸೂಕ್ತ ಫ್ಲೈಯಿಂಗ್ ಸ್ಕ್ಯಾಡ್ ವಾಹನಗಳಿಗೆ ಜಿಪಿಸಿ ಅಳವಡಿಸಬೇಕು ಹಾಗೂ ಜಿಪಿಎಸ್ ಮಾನಿಟರ್ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಹಾಗೂ ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ಡಿವೈಎಸ್‌ಪಿ ವಿಶ್ವನಾಥ ಕುಲಕರ್ಣಿ, ಮಸ್ಕಿ ತಹಶೀಲ್ದಾರ ಮಹೇಂದ್ರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಥೋಡ್, ಸಿಂಧನೂರು ತಹಶೀಲ್ದಾರ ಕವಿತಾ, ಪ್ರೋಬೇಷನ್‌ರಿ ಸಹಾಯಕ ಆಯುಕ್ತ ಮಹೇಶ, ಮಸ್ಕಿ ಸಿಪಿಐ ದೀಪಕ್ ಬೋಸ್ಲೆ ಸೇರಿದಂತೆ ಚುನಾವಣೆ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಇದ್ದರು.