ಪಾರದರ್ಶಕ ನೇಮಕಾತಿ; ಭಷ್ಟಾಚಾರಕ್ಕೆ ಕಡಿವಾಣ

ನವದೆಹಲಿ,ಮೇ.೧೬- ದೇಶದಲ್ಲಿ ಪಾರದರ್ಶಕವಾಗಿ ಉದ್ಯೋಗ ನೇಮಕಾತಿ ನಡೆಸುವುದರಿಂದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಅಂತ್ಯ ಹಾಡಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಅದರಲ್ಲಿಯೂ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಯಾವುದೇ ಸಂದರ್ಶನ ನಡೆಸದ ಸಂಪೂರ್ಣ ಆನ್‌ಲೈನ್ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತಿದೆ. ಯಾವುದೇ ಸಂದರ್ಶನವಿಲ್ಲದೆ ಆಯ್ಕೆ ಅರ್ಹರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ಧಾರೆ.ದೇಶಾದ್ಯ ೪೫ ವಿವಿಧ ಕಡೆಯಲ್ಲಿ ವಿವಿಧ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದ ೭೧ ಸಾವಿರ ಮಂದಿ ಅಭ್ಯರ್ಥಿಗಳಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ನೇಮಕಾತಿ ಪತ್ರ ನೀಡಿ ಮಾತನಾಡಿದ ಅವರು ಮೊದಲು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವುದು ಕಷ್ಟವಾಗಿತ್ತು. ಫಾರಂ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿತ್ತು. ಇಂದು ಫಲಿತಾಂಶಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್ ಆಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು, ಪ್ರತಿಯೊಂದು ನೀತಿಯು ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸುತ್ತಿದೆ ಎಂದು ಹೇಳಿದ ಅವರು ದೇಶದಲ್ಲಿ ಕಳೆದ ೯ ವರ್ಷಗಳಲ್ಲಿ,ಕೇಂದ್ರ ಸರ್ಕಾರ ಸುಮಾರು ೩೪ ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚಕ್ಕಾಗಿ ಖರ್ಚು ಮಾಡಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ, ವಾಲ್‌ಮಾರ್ಟ್‌ನ ಸಿಇಒ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಮುಂದಿನ ೩-೪ ವರ್ಷಗಳಲ್ಲಿ ಅವರ ಕಂಪನಿ ೮೦,೦೦೦ ಕೋಟಿ ರೂಪಾಯಿಗಳ ರಫ್ತು ಮಾಡಲಿದೆ ಎಂದು ಹೇಳಿದ್ದಾರೆ.ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ವಲಯದಲ್ಲಿ ಕೆಲಸ ಮಾಡಲು ಬಯಸುವ ಯುವಕರಿಗೆ ಇದು ದೊಡ್ಡ ಸುದ್ದಿಯಾಗಿದೆ. ೮,೦೦೦ ಕೋಟಿ ಮೌಲ್ಯದ ಮೇಡ್-ಇನ್-ಇಂಡಿಯಾ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಇದೆ ಎಂದು ಸಿಸ್ಕೋ ಸಿಇಒ ಕೂಡ ಹೇಳಿದ್ದಾರೆ. ಮುಂದಿನ ವಾರ ನಾನು ದೊಡ್ಡ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡುತ್ತೇನೆ ಮತ್ತು ಅವರೆಲ್ಲರೂ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.

ಗ್ರಾಮೀಣ ರಸ್ತೆ ಜಾಲ ವಿಸ್ತರಣೆ

ದೇಶದಲ್ಲಿ ೨೦೧೪ ರ ಮೊದಲು, ದೇಶದ ಗ್ರಾಮೀಣ ರಸ್ತೆ ಜಾಲ ೪ ಲಕ್ಷ ಕಿಲೋಮೀಟರ್‍ಗಿಂತ ಕಡಿಮೆ ವ್ಯಾಪಿಸಿತ್ತು, ಆದರೆ ಈಗ ಅದು ೭.೧೫ ಲಕ್ಷ ಕಿಲೋಮೀಟರ್‍ಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.೨೦೧೪ ರ ಮೊದಲು ದೇಶವು ಕೇವಲ ೭೪ ವಿಮಾನ ನಿಲ್ದಾಣಗಳನ್ನು ಹೊಂದಿತ್ತು. ಇಂದು ಈ ಸಂಖ್ಯೆ ಸುಮಾರು ೧೫೦ ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.