ಪಾರದರ್ಶಕ ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಲು ಸೂಚನೆ

ಧಾರವಾಡ, ಮಾ.31: ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಧಾರವಾಡ ಜಿಲ್ಲಾ ವಿಧಾನಸಭಾ ಚುನಾವಣೆ 2023 ರ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಚುನಾವಣಾ ನೀತಿ ಸಂಹಿತೆ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಮುಂಬರುವ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಪಾರದರ್ಶಕ ನಿಷ್ಪಕ್ಷಪಾತವಾಗಿ ನಡೆಯುವಂತೆ ಎಲ್ಲ ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು.
ಈಗಾಗಲೇ ನೇಮಕ ಮಾಡಲಾದ ಸಂಚಾರಿ ದಳ, ವಿಡಿಯೋ ಕಣ್ಗಾವಲು ತಂಡ, ವಿಡಿಯೋ ವೀಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುವಂತೆ ಆಯಾ ಕ್ಷೇತ್ರಗಳ ಅಧಿಕಾರಿಗಳು ನಿಗಾ ವಹಿಸತಕ್ಕದ್ದು ಎಂದರು.
ಅಧಿಕಾರಿಗಳು ಎಲ್ಲರನ್ನು ಸರಿಸಮಾನವಾಗಿ ನೋಡತಕ್ಕದ್ದು. ರಾಜಕೀಯ ಪಕ್ಷಗಳ ನಡತೆ, ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಚುನಾವಣಾ ಆಯೋಗದ ಎಲ್ಲ ವರದಿಗಳನ್ನು ಅಂದಿನ ದಿನವೇ ಕಳುಹಿಸಬೇಕು.
ವಾಣಿಜ್ಯ ತೆರಿಗೆ ಅಧಿಕಾರಿಗಳು, ಅಬಕಾರಿ ಅಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಶಿವಾನಂದ ಭಜಂತ್ರಿ ತಿಳಿಸಿದರು. ಶೀಘ್ರದಲ್ಲೇ ಎಲ್ಲ ಚುನಾವಣಾ ತಂಡಗಳಿಗೆ ತರಬೇತಿ ನೀಡಲಾಗುವುದೆಂದರು.
ಪೋಸ್ಟಲ್ ಬ್ಯಾಲೆಟ್ ಬಗ್ಗೆ ಭೂಮಾಪನ ಇಲಾಖೆ ಅಧಿಕಾರಿ ಡಿಡಿಎಲ್‍ಆರ್ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಭರತ್, ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ಎಲ್ಲ ಕ್ಷೇತ್ರಗಳ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.