ಪಾರದರ್ಶಕ ಚುನಾವಣೆ ನಡೆಸಲು ಒತ್ತಾಯ

ಬೀದರ್:ಫೆ.2: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ದೇಶಾದ್ಯಂತ ಆನ್‍ಲೈನ್ ಹಣಕಾಸು ವ್ಯವಹಾರ ಬಂದ್ ಮಾಡುವುದು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜೈ ಭಾರತ ಮಾತಾ ಸೇವಾ ಸಮಿತಿ ಒತ್ತಾಯಿಸಿದೆ.
sಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರುs ಶ್ರೀ ಹವಾ ಮಲ್ಲಿನಾಥ ಮಹಾರಾಜರ ಮಾರ್ಗದರ್ಶನದಂತೆ ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಜಿ, ರಾಜ್ಯ ಸಮಿತಿ ಪ್ರಮುಖರಾದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಸ್.ವಿ.ಆವಂಟಿ, ಗುರುಸಿದ್ದಪ್ಪ ಬೆನಕನಳ್ಳಿ ಅವರು ಗುರುವಾರ ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತರ ಮೂಲಕ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಮನವಿ ಪತ್ರ ರವಾನಿಸಿ ವಿವಿಧ ಬೇಡಿಕೆ ಮುಂದಿಟ್ಟಿದ್ದಾರೆ.
ಚುನಾವಣೆ ನ್ಯಾಯಸಮ್ಮತ, ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಹೀಗಾಗಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೆ ಫೋನ್-ಪೇ, ಜಿ-ಪೇ ನಂತಹ ಆನ್‍ಲೈನ್ ಹಣಕಾಸು ವ್ಯವಹಾರ ಸಂಪೂರ್ಣವಾಗಿ ಬಂದ್ ಮಾಡಬೇಕು. ಮದ್ಯದ ಉತ್ಪಾದನೆ ಜೊತೆಗೆ ಮಾರಾಟವನ್ನು ನಿಷೇಧಿಸಬೇಕು. ಸಿಗರೇಟ್, ಗುಟ್ಕಾ ಇನ್ನಿತರೆ ಮಾದಕ ವಸ್ತು ಮಾರಾಟ ನಿಲ್ಲಿಸಬೇಕು. ವೈನಶಾಪ್, ಧಾಬಾ, ಪಬ್, ಬಾರ್‍ಗಳನ್ನು ಸಹ ಈ ಅವಧಿಯಲ್ಲಿ ಮುಚ್ಚಿಡಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣೆಯಲ್ಲಿ ಮತದಾರರ ಮೇಲೆ ಆಮಿಷವೊಡ್ಡುವ ನಾನಾ ಪ್ರಯತ್ನ ನಡೆಯುತ್ತವೆ. ಇದೀಗ ಆನ್‍ಲೈನ್ ಹಣಕಾಸಿನ ದಂಧೆ ಜೋರಾಗಿದೆ. ಹೀಗಾಗಿ ಮೊಬೈಲ್ ಆ್ಯಪ್‍ಗಳಿಂದ ಹಣ ವರ್ಗಾವಣೆ ನಡೆಸಬಾರದು. ಮದ್ಯ ಸೇರಿ ಮಾದಕ ವಸ್ತುಗಳ ತಯಾರಿಕೆ, ಮಾರಾಟವನ್ನು ಸಂಪೂರ್ಣ ಬಂದ್ ಮಾಡಬೇಕು. ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಅಕ್ರಮ ನಡೆಯಬಾರದು. ಪ್ರತಿಯೊಬ್ಬರು ಮತದ ಹಕ್ಕನ್ನು ದೇಶದ ಹಿತ ಹಾಗೂ ಪ್ರಜಾಪ್ರಭುತ್ವ, ಸಂವಿಧಾನ ಗಟ್ಟಿಗೊಳಿಸಲು ಬಳಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯಬಾರದು. ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಜನರಲ್ಲಿ ರಾಷ್ಟ್ರಪ್ರೇಮ ಮೂಡಬೇಕು. ಎಲ್ಲಕಿಂತಲೂ ರಾಷ್ಟ್ರಧರ್ಮ ಶ್ರೇಷ್ಠ ಎಂಬ ಸಂದೇಶ ಸಾರುತ್ತ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ ಅವರು ದೇಶವ್ಯಾಪಿ ಸಂಚರಿಸುತ್ತಿದ್ದಾರೆ.ಪಾರದರ್ಶಕ ಚುನಾವಣೆ ನಡೆಯಬೇಕು ಹಾಗೂ ಯೋಗ್ಯರ ಆಯ್ಕೆ ಆಗಬೇಕೆಂಬುದು ಪೂಜ್ಯರ ಆಶಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಬರುವ ದಿನಗಳಲ್ಲಿ ಇನ್ನಷ್ಟು ಜನಜಾಗೃತಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ಜರುಗಲಿವೆ ಎಂದು ವೈಜಿನಾಥ ಝಳಕಿ ತಿಳಿಸಿದ್ದಾರೆ.