ಪಾರಂಪರಿಕ ಸ್ಥಳಗಳಿಂದ ಇತಿಹಾಸ, ಸಂಸ್ಕøತಿ ಉಳಿಯಲು ಸಾಧ್ಯ

ಕಲಬುರಗಿ:ಎ.18: ನಮ್ಮ ಜಿಲ್ಲೆ ಸೇರಿದಂತೆ ದೇಶದಲ್ಲಿ ಅನೇಕ ಸುಕ್ಷೇತ್ರಗಳು, ಸ್ಮಾರಕಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಸ್ಥಳಗಳಿದ್ದು ಅವುಗಳನ್ನು ಅಭಿವೃದ್ಧಿಗೊಳಿಸುವುದು ಅವಶ್ಯಕವಾಗಿದೆ. ಇದರಿಂದ ನಮ್ಮ ದೇಶದ ಸಂಸ್ಕøತಿ, ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ದೊರೆಯಲು ಸಾಧ್ಯವಾಗುತ್ತದೆ. ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಸಂಶೋಧನೆ ಜರುಗಬೇಕು. ಭವ್ಯವಾದ ಅನೇಕ ತಾಣಗಳು, ಸ್ಮಾರಕಗಳು, ಸುಕೇತ್ರಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳು ನಾಶವಾದರೆ ಮುಂದಿನ ಪೀಳಿಗೆ ಕೇವಲ ಚಿತ್ರದಲ್ಲಿ ನೋಡಲು ಮಾತ್ರ ಸಾಧ್ಯವಿದ್ದು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.

    ನಗರದ ಆಳಂದ ರಸ್ತೆಯ ಶಹಾಬಜಾರ ನಾಕಾ ಸಮೀಪದಲ್ಲಿರುವ 'ಸ್ಥಂಭ ರಾಮಲಿಂಗೇಶ್ವರ ದೇವಸ್ಥಾನದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 'ವಿಶ್ವ ಪಾರಂಪರಿಕ ದಿನಾಚರಣೆ'ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
  ದೇವಸ್ಥಾನದ ಪೂಜ್ಯ ನಾಗೇಶ ಮಹಾರಾಜ್ ಸ್ವಾಮೀಜಿ ಮಾತನಾಡಿ, ಐತಿಹಾಸಿಕ, ಅಪರೂಪದ ವಾಸ್ತುಶಿಲ್ಪ ಹೊಂದಿರುವ, 2400 ವರ್ಷಗಳ ಪುರಾತನ, 'ಕಲಬುರಗಿ ಗ್ರಾಮ ದೇವತೆ' ಎಂದು ಹೇಳಲ್ಪಟ್ಟ ನಗರದ ಶಹಾಬಜಾರ ನಾಕಾ ಸಮೀಪವಿರುವ ಸ್ಥಂಭ ರಾಮಲಿಂಗೇಶ್ವರ ದೇವಾಲಯ ಹಾಗೂ ಅದರ ಆವರಣದ ಸ್ಥಳ ಅಭಿವೃದ್ಧಿಗೊಳಿಸಿ, ಅದರ ಬಗ್ಗೆ ವ್ಯಾಪಕ ಪ್ರಚಾರವಾಗುವ ಕೆಲಸ ಜರುಗಬೇಕಾಗಿದೆ ಎಂದರು.
ಈ ದೇವಸ್ಥಾನದಲ್ಲಿ ಬಹು ಪುರಾತನ ಸ್ಥಾವರಲಿಂಗವಿದೆ. ನಿರ್ಲಕ್ಷ್ಯದಿಂದ ಸುತ್ತಲು ಗಿಡ-ಗಂಟೆ ಬೆಳೆದಿತ್ತು. ಪಡ್ಡೆ ಹುಡಗರ ಕೆಟ್ಟ ಚಟಗಳನ್ನು ಮಾಡುವ ಅಡ್ಡವಾಗಿತ್ತು. ದೇವಾಲಯದ ಪರಿಸರ ಕಸದಿಂದ ತುಂಬಿತ್ತು. ನಾನು ದೇವಸ್ಥಾನದ ಮುಖ್ಯಸ್ಥನಾದ ಮೇಲೆ ಸುತ್ತ-ಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಿ, ದೇವಸ್ಥಾನದ ಆವರಣದ ಸುಚಿತ್ವವವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಭಕ್ತರು ದೇವಸ್ಥಾನದ ಮಹಿಮೆಯನ್ನು ಕಂಡು ಆಗಮಿಸುತ್ತಿದ್ದಾರೆ. ಪ್ರತಿ ಸೋಮವಾರ ಸಂಜೆ ದೀಪೋತ್ಸವ, ಶಿವರಾತ್ರಿ ದಿನದಂದು ಇಡೀ ದಿನ ವಿಶೇಷ ಪೂಜೆ, ಕಾರ್ಯಕ್ರಮಗಳು ಜರುಗುತ್ತವೆ. ಐತಿಹಾಸಿಕ ದೇವಸ್ಥಾನವಾದ ಇದರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಂಬಂಧಿತ ಜನಪ್ರತಿನಿಧಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರು ಕೂಡಾ, ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
  ಕಾರ್ಯಕ್ರಮದಲ್ಲಿ ವೀರಪ್ರಸಾದ ಮಹಾರಾಜ ಮುತ್ಯಾ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅನೀಲಕುಮಾರ, ಮಹಾದೇವ, ನಾಗೋಭಾ ಚವ್ಹಾಣ, ವಿಜಯಸಿಂಗ ಠಾಕೋರ್, ಧನರಾಜ ಪಿಂಪಳೆ, ಸುಭಾಶ್ಚಂದ್ರ ಚೌಧರಿ ಸೇರಿದಂತೆ ಮತ್ತಿತರರಿದ್ದರು.