ಪಾರಂಪರಿಕ ವೈದ್ಯ ಪದ್ಧತಿ ಎಂದೆಂದಿಗೂ ಜೀವಂತ

ಕೋಲಾರ,ಆ.೨- ಪಾರಂಪರಿಕ ವೈದ್ಯ ಪದ್ಧತಿ ಎಂದೆಂದಿಗೂ ಜೀವಂತವಾಗಿರಲಿದೆ ಎಂದು ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ.ಶ್ರೀ.ಶ್ರೀ ಮಂಗಳಾನಂದನಾಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಬಂಗಾರಪೇಟೆಯಲ್ಲಿ ಪಾರಂಪರಿಕ ವೈದ್ಯ ಪರಿಷತ್ ಮತ್ತು ಶ್ರೀ ಶಿರಡಿ ಸಾಯಿಬಾಬಾ ಅಭಿವೃದ್ಧಿ ಸಂಘ (ರಿ) ವೈದ್ಯ ಪರಿಷತ್ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಪಾರಂಪರಿಕ ವೈದ್ಯರ ಕಾರ್ಯಗಾರದಲ್ಲಿ ದಿವ್ಯ ಸಾನಿಧ್ಯ ವಹಿಸಿ ಕಾರ್ಯಗಾರವನ್ನು ಉದ್ಘಾಟಿಸಿದ ಶ್ರೀಗಳು ಮಾತನಾಡಿ, ಪಾರಂಪರಿಕ ವೈದ್ಯ ಪದ್ಧತಿ ಅನಾದಿ ಕಾಲದಿಂದಲೂ ಬೆಳೆದು ಬಂದಿದ್ದು ಇಂದಿಗೂ ಕೂಡ ಜೀವಂತವಾಗಿದೆ ಇದನ್ನು ಉಳಿಸಿ ಬೆಳಸಬೇಕಾಗಿದೆ ಎಂದರು. ಚರಕ ಸುಶ್ರುತ ಗ್ರಂಥಗಳಲ್ಲಿ ಇದರ ಬಗ್ಗೆ ದಾಖಲೆಗಳಿದ್ದು ಈ ಪದ್ಧತಿಯನ್ನು ಪ್ರಶ್ನಿಸುವವರಿಗೆ ಇವುಗಳು ತಾಜಾ ಉದಾಹರಣೆಗಳಾಗಿವೆ. ಇದರ ಬೆಳವಣಿಗೆ ಪರಿಷತ್ ಉತ್ತಮ ಕೆಲಸ ಕಾರ್ಯ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾದದ್ದು.
ಈ ವೈದ್ಯ ಪದ್ಧತಿಗೆ ತನ್ನದೇ ಆದ ಶಕ್ತಿ ಇದ್ದು ಇದಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಜಿ.ಮಹದೇವಯ್ಯ ಮಾತನಾಡಿ ಪಾರಂಪರಿಕ ವೈದ್ಯರಿಗೋಸ್ಕರ ಹಾಗೂ ಪಾರಂಪರಿಕ ವೈದ್ಯರನ್ನು ಸಂಘಟಿಸುವ ದೃಷ್ಟಿಯಿಂದ ರಾಜ್ಯದ ನಾನಾ ಭಾಗಗಳಲ್ಲಿ ವಲಯ ಮಟ್ಟದ ಕಾರ್ಯಾಗಾರಗಳನ್ನು ಪರಿಷತ್ ವತಿಯಿಂದ ನಡೆಸುತ್ತಿದ್ದು ಇದರ ಸದುಪಯೋಗವನ್ನು ಬಳಸಿಕೊಳ್ಳಬೇಕೆಂದರು.
ಈ ವೈದ್ಯ ಪದ್ಧತಿಯನ್ನು ಮಾಡಲು ಕಾನೂನಿನಲ್ಲಿ ಇತಿಮಿತಿ ಇದ್ದು ಅದನ್ನು ಮೀರಿ ಯಾರು ನಡೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಶ್ರೀ ಶಿರಡಿ ಸಾಯಿಬಾಬಾ ಅಭಿವೃದ್ಧಿ ಸಂಘದ ಧರ್ಮದರ್ಶಿ ಮುನಿ ಮಾರಪ್ಪ ಮಾತನಾಡಿ, ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ನೀಡಲಾಗುವುದು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕಾರ್ಯಗಾರ ಶ್ರೀ ಶಿರಡಿ ಬಾಬಾ ಅಭಿವೃದ್ಧಿ ಸಂಘದ ಧರ್ಮದರ್ಶಿಗಳ ಸಹಕಾರದಿಂದ ನಡೆಯುತ್ತಿದ್ದು, ಮುಂದೆಯೂ ಸಹ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಗೆ ತಮ್ಮ ಸಹಕಾರ ಬೇಕಾಗಿದೆ ಎಂದರು.