ಪಾರಂಪರಿಕ ತಾಣ ಹಂಪಿ ಪರಿಸರ ಸುತ್ತಿದ ವಿದೇಶಿ ಪ್ರತಿನಿಧಿಗಳು


ಸಂಜೆವಾಣಿ ವಾರ್ತೆ
ಹೊಸಪೇಟೆ: ಹಂಪಿಯ ಸ್ಮಾರಕಗಳನ್ನು ಬ್ಯಾಟರಿ ಚಾಲಿತ ವಾಹನಗಳಲ್ಲಿ ಸುತ್ತಾಡಿ ವೀಕ್ಷಣೆ ಮಾಡಿದ ಜಿ-20 ರಾಷ್ಟ್ರಗಳ ಪ್ರತಿನಿಧಿಗಳು, ರಾಣಿ ಸ್ನಾನ ಗೃಹದ ಬಳಿ ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಘೋಷಣೆ ಮಾಡಿದರು.
ಜಿ-20 ರಾಷ್ಟ್ರಗಳು ಕೂಡ ಜಾಗತಿಕ ತಾಪಮಾನದ ಬಗ್ಗೆ ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಇದರ ದ್ಯೋತಕವಾಗಿ ಹಾಗು ಹಂಪಿಯ ಭವ್ಯ ಸ್ಮಾರಕಗಳ ಬಳಿ ಪರಿಸರ ಸಂರಕ್ಷಣೆ ಹಾಗು ಸ್ವಚ್ಛತೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ವಿದೇಶಿ ಪ್ರತಿನಿಧಿಗಳು ಸಸಿಗಳನ್ನು ನೆಟ್ಟರು. ವಿವಿಧ ಬಗೆಯ ಸಸಿಗಳನ್ನು ನೆಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಬಳಿಕ ಮಹಾನವಮಿ ದಿಬ್ಬ ಸ್ಮಾರಕ ವೀಕ್ಷಣೆ ಮಾಡಿದ ಜಿ-20 ರಾಷ್ಟ್ರಗಳ ಪ್ರತಿನಿಧಿಗಳು, ನವರಾತ್ರಿ ಸಮಯದಲ್ಲಿ ವಿಜಯನಗರದ ಆಳರಸರು ಒಂಬತ್ತು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸ್ಥಳದಲ್ಲಿ ನಡೆಸುತ್ತಿದ್ದರು ಎಂಬ ಚರಿತ್ರೆಯನ್ನು ತಿಳಿದುಕೊಂಡರು. ಬಳಿಕ ಆಗಿನ ಕಾಲದ ನೀರಾವರಿ ವ್ಯವಸ್ಥೆ, ನೀರು ಸರಬರಾಜು ಬಗ್ಗೆ ತಿಳಿದುಕೊಂಡರು. ಬಳಿಕ ಕಮಲ ಮಹಲ್ ಸ್ಮಾರಕ ಕೂಡ ವೀಕ್ಷಣೆ ಮಾಡಿದರು. ಹಂಪಿ ಸ್ಮಾರಕಗಳ ವೀಕ್ಷಣೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಿತ್ತು. ಬಹುತೇಕ ಮಹಿಳಾ ಚಾಲಕಿಯರು ವಾಹನಗಳನ್ನು ಚಾಲನೆ ಮಾಡಿದರು.