ಪಾರಂಪರಿಕ ಜಾನಪದ ಕಲೆಗಳನ್ನು ಉಳಿಸಿ ಬೆಳಸಲು ಕರೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು19: ನಮ್ಮ ಪಾರಂಪರಿಕ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಜನಪದರ ಬದುಕಿನ ಭಾಗವಾದ ಅನೇಕ ಕಲೆಗಳು ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಮರೆಯಾಗುತ್ತಲಿವೆ. ಅವುಗಳಿಗೆ ಮತ್ತೆ ಪುನಶ್ಚೇತನ ನೀಡುವ ಅಗತ್ಯವಿದೆ  ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಹೇಳಿದರು.
ಸ್ಥಳೀಯ ರಾಜಾರಾಮ್ ಕಲ್ಯಾಣಮಂಟಪದಲ್ಲಿ  ಸ್ಥಳೀಯ ವಿಜಯನಗರ ಜಿಲ್ಲೆ ಪತಂಜಲಿ ಯೋಗ ಸಮಿತಿಯು ಹಮ್ಮಿ ಕೊಂಡಿದ್ದ ಗುರುಪೂರ್ಣಿಮ ಮಹೋತ್ಸವದಲ್ಲಿ ಪತಂಜಲಿ ಸಮಾಜ ಸೇವಾ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.  
ಜೋಗತಿ ನೃತ್ಯವನ್ನು ಇಡೀ ದೇಶದಾದ್ಯಂತ ಪ್ರದರ್ಶನ ಮಾಡಿದ್ದೇನೆ.  ನಾನು ಯೋಗಾಭ್ಯಾಸ ಮಾಡಿಲ್ಲ. ಯೋಗ ಅಂದರೆ ಕೇವಲ ಆಸನ-ಪ್ರಾಣಾಯಾಮ ಮಾಡುವುದು ಅಷ್ಟೇ ಅಲ್ಲ. ಯೋಗ ಅಂದರೆ ಕ್ರಮಬದ್ಧ ಜೀವನಶೈಲಿ. ದೈನಂದಿನ ಬದುಕಿನಲ್ಲಿ ಶಿಸ್ತುಬದ್ಧ ಜೀವನ ನಡೆಸುವುದೂ ಸಹ ಯೋಗ. ಪತಂಜಲಿ ಯೋಗ ಸಮಿತಿಯು ಹೊಸಪೇಟೆಯಲ್ಲಿ ಯೋಗಕ್ಕೆ ಸಮಬಂಧಿಸಿದ ಅನೇಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ತಿಳುವಳಿಕೆಯನ್ನು ನೀಡುತ್ತ ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ನನ್ನಲ್ಲಿರುವ ಜಾನಪದ ಕಲೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುವುದು ನನಗೆ ತುಂಬ ಸಂತೋಷವನ್ನು ತಂದಿದೆ ಎಂದರು.
ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ  ಭವರಲಾಲ್ ಆರ್ಯ ಅವರು  ಸಮಾಜ ಸೇವಕರಾದ  ವಿ.ಆರ್.ಸಂದೀಪಸಿಂಗ್, ಯೋಗ ಸಾಧಕಿ ಶ್ರೀಮತಿ ನೂರಜಹಾನ್, ಕೊಟ್ಟೂರಿನ  ದೇವರಮನಿ ಕರಿಯಪ್ಪ, ವಿಶ್ವಚೇತನ ಅಂಧಮಕ್ಕಳ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗಂಗಾಧರ ಗಡಾದ ಅವರಿಗೆ ಪತಂಜಲಿ ಸಮಾಜ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಕಾಶವಾಣಿಯ ಪ್ರಸಾದ ಮತ್ತು ಶ್ರೀಮತಿ ನಾಗರತ್ನ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳಾ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಶ್ರೀಮತಿ ದಾಕ್ಷಾಯಣಿ ಶಿವಕುಮಾರ, ಶ್ರೀಮತಿ ಗೌರಮ್ಮ ಬ್ಯಾಳಿ,  ಭೂಪಾಲ ರಾಘವೇಂದ್ರಶೆಟ್ಟಿ, ಬಾಲಚಂದ್ರಶರ್ಮ ಕಿರಣಕುಮಾರ್, ಕೃಷ್ಣ ನಾಯಕ, ವೀರೇಶಬಾಬು ಇದ್ದರು.

Attachments area