ಪಾಮನಕಲ್ಲೂರು: ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಎಸ್‌ಎಫ್‌ಐ, ಡಿವೈಎಫ್‌ಐ, ಕರವೇ ನೇತೃತ್ವದಲ್ಲಿ ತಾ ಪಂ ಮನವಿ

ರಾಯಚೂರು (ಜು.೨೨): ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯತಿಯಲ್ಲಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಮಸ್ಕಿ ತಾಲೂಕು ಪಂಚಾಯತಿಯ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕರಾದ ಪಂಪನಗೌಡ ಪಾಟೀಲ್ ರವರಿಗೆ ಮನವಿ ಸಲ್ಲಿಸಿದರು.
ಮಸ್ಕಿಯ ತಾಲೂಕು ಪಂಚಾಯತಿ ಕಛೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಮುಖಂಡರು, ಪಾಮನಕಲ್ಲೂರು ಗ್ರಾಮದ ಸರ್ವೇ ನಂಬರ್ ೧೫೧ರ ಸರ್ಕಾರಿ ಗಾಯರಾಣಿ ಭೂಮಿಯಲ್ಲಿ ಮಾಡಲಾಗುತ್ತಿರುವ ೫೦ ಲಕ್ಷ ರೂ. ಮೌಲ್ಯದ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಎಮ್.ಎಸ್ ಕಾಫಿಯನ್ನು ಕೂಡಲೇ ನೀಡಬೇಕು ಎಂಬ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ಚರಂಡಿ, ಸಿಸಿ ರಸ್ತೆ, ರೈತರ ಜಮೀನುಗಳಿಗೆ ತೆರಳುವ ರಸ್ತೆ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಪಿಡಿಒ ಅಮರೇಶಪ್ಪರವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕೂಡಲೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಕಛೇರಿಗಳ ಮುಂದೆ ಹಮ್ಮಿಕೊಳ್ಳಲಾಗುತ್ತದೆ ಎಂದು ಇದೇ ವೇಳೆ ಮುಖಂಡರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷರಾದ ರಮೇಶ ವೀರಾಪೂರ, ಕರವೇ ಅಧ್ಯಕ್ಷರಾದ ರಮೇಶ ಗಂಟ್ಲಿ ಪಾಮನಕಲ್ಲೂರು, ಕೆಪಿಆರ್‌ಎಸ್ ಮುಖಂಡರಾದ ಹನುಮಂತ ಬಲದಂಡಿ, ಪಂಪಾಪತಿ ಪಟ್ಟಣ್ಣಶೆಟ್ಟಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಅಮರೇಶ ಡಿ ಪೂಜಾರಿ ಪಾಮನಕಲ್ಲೂರು, ಸುಕುಮುನಿ ಪಾಮನಕಲ್ಲೂರು, ನಾಗರಾಜ ಟುಬಾಕಿ ಸೇರಿದಂತೆ ಅನೇಕರಿದ್ದರು.