ಪಾಪು ಸಾಧನೆಗಳ ಪರಿಚಯಕ್ಕೆ ಸರ್ಕಾರ ಮುಂದಾಗಬೇಕು

ಹುಬ್ಬಳ್ಳಿ,ನ12: ನಾಡೋಜ ಡಾ.ಪಾಟೀಲ್ ಪುಟ್ಟಪ್ಪನವರು ನಾಡು ನುಡಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಅವರು ನಿಧನರಾದ ಬಳಿಕ ಸರ್ಕಾರ ಅವರ ಸಾಧನೆಯತ್ತ ಗಮನ ಹರಿಸುತ್ತಿಲ್ಲ ಹೀಗಾಗಿ ಪಾಪು ಅವರ ಪರಿಚಯ ಹಾಗೂ ಸಾಧನೆಗಳ ಕುರಿತಂತೆ ರಾಜ್ಯ ಸರ್ಕಾರ ಶಾಲಾ-ಕಾಲೇಜು ಪಠ್ಯ ಪುಸ್ತಕಗಳಲ್ಲಿ ಪ್ರಕಟಿಸುವ ಮೂಲಕ ಮುಂಬರುವ ಪೀಳಿಗೆಗೆ ಅರ್ಥೈಸಬೇಕು ಎಂದು ನಾಡೋಜ ಡಾ.ಪಾಟೀಲ್ ಪುಟ್ಟಪ್ಪನವರ ಮೊಮ್ಮಗಳಾದ ವಿಜಯಾ ಪಾಟೀಲ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ನಗರದಲ್ಲಿ ಪಾಪು ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸಿ ಪ್ರತಿನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದ್ದು ಆದರೆ ಸರ್ಕಾರ ಏಕೆ ಮೌನ ವಹಿಸಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪಾಟೀಲ್ ಪುಟ್ಟಪ್ಪನವರ ಪುತ್ಥಳಿ ನಿರ್ಮಿಸಬೇಕು, ಹುಬ್ಬಳ್ಳಿಯಲ್ಲಿ ಒಂದು ರಸ್ತೆಗೆ ಪಾಪು ಅವರ ಹೆಸರು ಇಡಬೇಕು. ಅಲ್ಲದೇ ಹು-ಧಾ ಪಾಪು ಅವರ ಕರ್ಮ ಭೂಮಿಯಾಗಿದ್ದು, ಅವಳಿ ನಗರದ ಮಧ್ಯೆ ಅವರ ಹೆಸರಿನಲ್ಲಿ 5 ಎಕರೆ ಭೂಮಿ ಮೀಸಲಿಡಬೇಕು ಎಂದು ವಿಜಯಾ ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಪು ಅವರ ಪುತ್ರಿ ಮಂಜುಳಾ ಪಾಟೀಲ್ ಉಪಸ್ಥಿತರಿದ್ದರು.