ಪಾಪನಾಶ ದೇವಸ್ಥಾನಕ್ಕೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ತಂಡ ಭೇಟಿ

ಬೀದರ,ಡಿ.8: ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಮಂಜೂರಾತಿಗೊಂಡ ಪಾಪನಾಶ ದೇವಸ್ಥಾನದ ಅಭಿವೃದ್ದಿಗೆ ಸಂಬಂಧಿಸಿದಂತೆ ಇಂದು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕರ ತಂಡ, ಪಾಪನಾಶ ದೇವಸ್ಥಾನಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿತು.
ಕೇಂದ್ರ ಸಚಿವರು ಹಾಗೂ ಬೀದರ ಸಂಸದರಾದ ಭಗವಂತ ಖೂಬಾ ಅವರು, ಪಾಪನಾಶ ದೇವಸ್ಥಾನದ ಸರ್ವಾಂಗೀಣ ಅಭಿವೃದ್ದಿಗೆ ಪ್ರಸಾದ ಯೋಜನೆಯಡಿ ನೀಡಲಾಗುವ 5 ಕೋಟಿ ಅನುದಾನಕ್ಕಿಂತ ಹೆಚ್ಚಿನ ಅನುದಾನ ಅವಶ್ಯಕವಾಗಿದೆ, ಹಾಗಾಗಿ ಸುಮಾರು 22 ಕೋಟಿ ಅನುದಾನದ ಅವಶ್ಯಕತೆಯಿದೆ ಎಂದು ತಿಳಿಸಿ, ಪ್ರಾಥಮಿಕವಾಗಿ ಅಗತ್ಯ ಪ್ರಸ್ತಾವನೆಯನ್ನು ಸಿದ್ಧಗೊಳಿಸಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಕೇಂದ್ರದ ತಂಡ ಪಾಪನಾಶಕ್ಕೆ ಆಗಮಿಸಿ, ಪಾಪನಾಶ ದೇವಸ್ಥಾನದ ಸುತ್ತಮುತ್ತಲಿನ ಸ್ಥಳ ಪರಿಶೀಲನೆ ನಡೆಸಿತ್ತು.
ಈ ಸಂದರ್ಭದಲ್ಲಿ ಅಧಿಕಾರಿಗಳು ಇಲ್ಲಿಯ ವಾತಾವರಣ, ಪಾಪನಾಶದ ಇತಿಹಾಸ ಮತ್ತು ಪ್ರಸ್ಥಾವನೆಯಲ್ಲಿ ಮನವಿ ಮಾಡಿಕೊಂಡಿರುವ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಆರ್ಕಿಟೇಕ್ಟ್‍ಗಳಿಂದ (ವಾಸ್ತುಶಿಲ್ಪಿ)ಗಳಿಂದ ಪಡೆದುಕೊಂಡರು.ಇದರ ಜೊತೆಗೆ ಪ್ರಸ್ತಾವನೆಯಲ್ಲಿ ಮಾಡಬಹುದಾದ ತಾಂತ್ರಿಕ ಬದಲಾವಣೆಗಳ ಕುರಿತು, ಜನರನ್ನು ಸೆಳೆಯುವಂತೆ, ಪ್ರಸ್ತಾವನೆಯಲ್ಲಿ ಕಾಮಗಾರಿಗಳು ಸೇರಿಸಬೇಕೆಂದು ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸಚಿವರು ಪಾಲ್ಗೊಂಡಿರುವ ಕಾರಣ, ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸರಿಯಾಗಿ ಪರಿಶೀಲನೆ ನಡೆಸಿ, ಈ ದೇವಸ್ಥಾನದ ಅಭಿವೃದ್ದಿ ಹಾಗೂ ಪ್ರವಾಸೋದ್ಯಮ ಅಭಿವೃದ್ದಿಗೆ ಅನುಕೂಲವಾಗುವ ಹಾಗೆ ನಮ್ಮ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕು ಹಾಗೂ ನಮ್ಮ ಭಕ್ತರ ಆಶಯದಂತೆ ದೇವಸ್ಥಾನದ ಅಭಿವೃದ್ದಿ ಹಾಗೂ ಪ್ರವಾಸೋದ್ಯಮ ಅಭಿವೃದ್ದಿಗೆ ಸಹಕರಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹ್ಮದ ಫಾರೂಕ್, ಸಿ.ಪಿ.ಎಮ್.ಓ ಸಮಾಲೋಚಕ ಪ್ರಶಾಂತಕುಮಾರ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ರೂಪಾ, ಸಹಾಯಕ ನಿರ್ದೇಶಕ ಪ್ರಭು ರೆಡ್ಡಿ, ಕೇಂದ್ರ ಸಚಿವರ ಆಪ್ತಸಹಾಯಕ ಅಮರ ಹಿರೇಮಠ, ಪಾಪನಾಶ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಕಾಂತ ಶೇಟಕಾರ, ರಾಜಶೇಖರ ಮಿಠಕಾರಿ, ಸೋಮಶೇಖರ ಸಿರಶಂದ, ಶಿವಾರಾಜ ಕಣಜಿ, ಪ್ರಶಾಂತ ಹೊಳಸಮುದ್ರ, ರಾಕೇಶ ಪಾಟೀಲ್, ಸೂರ್ಯಕಾಂತ ಶೇಟಕಾರ ಇತರರು ಉಪಸ್ಥಿತರಿದ್ದರು.