ಪಾನ್ ಮಸಾಲ, ತಂಬಾಕು ಮಾರಾಟ ಬಳಕೆ ಮುಂದಿನ ಆದೇಶದವರೆಗೆ ನಿಷೇಧ: ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್

ವಿಜಯಪುರ, ಮೇ.29-ಕೋವಿಡ್-19 ವೈರಸ್ ನಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು, ಜಿಲ್ಲೆಯಲ್ಲಿ ಪಾನ್ ಮಸಾಲ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಕೋವಿಡ್-19 ಎರಡನೇ ಅಲೆಯ ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, (ಗುಟ್ಕಾ) ಜರ್ದಾ, ಖೆನಿ, ಇತ್ಯಾದಿ ಬಳಕೆಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನಿಮೋನಿಯಾ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡಲು ಕಾರಣವಾಗಬಹುದು.
ಆದಕಾರಣ ಬೀಡಿ ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್ಸುಗಳು ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರೆ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದು.
ಈ ಮೇಲೆ ವಿವರಿಸಿದಂತೆ ಕೋವಿಡ್ 19 ಸೋಂಕಿತರು ಜಿಗಿಯುವ ಮಸಾಲಾ, ತಂಬಾಕು, ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸಿ ಉಗಳುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್ 19 ವೈರಸ್ ಹರಡುವ ಭೀತಿ ಇರುತ್ತದೆ, ಆದ್ದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೂ ತಂಬಾಕು ಹಾಗೂ ಪಾನ್, ಮಸಾಲ,ಗುಟ್ಕಾ,ಜರ್ದಾ, ಖೆನಿ ಉತ್ಪನ್ನಗಳನ್ನು ವಿಜಯಪುರ ಜಿಲ್ಲಾದ್ಯಂತ ಅಂಗಡಿಗಳಲ್ಲಿ ಮಾರಾಟ ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಈ ಆದೇಶ ಉಲ್ಲಂಘನೆಯಾದಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ-1897, ವಿಪತ್ತು ನಿರ್ವಹಣಾ ಕಾಯ್ದೆ-2005, ಐಪಿಸಿ-188,268,269 ಮತ್ತು270 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.