ಪಾದರಾಯನಪುರದಲ್ಲಿ ಸೋಂಕು ವಿರಳ

ಬೆಂಗಳೂರು, ಏ.೨೫- ಕೋವಿಡ್ ಎರಡನೇ ಅಲೆ ಇಡೀ ಬೆಂಗಳೂರಿಗೆ ಆವರಿಸಿಕೊಂಡಿದೆ. ಆದರೆ, ಈ ಹಿಂದಿನ ಕೋವಿಡ್ ಪ್ರಕರಣಗಳ ಹಾಟ್‌ಸ್ಪಾಟ್ ಎಂದೇ ಗುರುತಿಸಿಕೊಂಡಿದ್ದ ಪಾದರಾಯನಪುರ ವಾರ್ಡ್‌ನಲ್ಲಿ ಮಾತ್ರ ಸೋಂಕಿನ ಪ್ರಕರಣಗಳು ವಿರಳವಾಗಿವೆ.

ಕಳೆದ ಸಾಲಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೋವಿಡ್ ಪ್ರಕರಣಗಳ ಹಾಟ್‌ಸ್ಪಾಟ್ ಎಂದೇ ಗುರುತಿಸಿಕೊಂಡಿದ್ದ ಪಾದರಾಯನಪುರ ವಾರ್ಡ್ ಅನ್ನು ರಾಜ್ಯದಲ್ಲಿ ಮೊದಲು ಸೀಲ್‌ಡೌನ್ ಮಾಡಲಾಗಿತ್ತು.ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಎರಡನೇ ಅಲೆಯಿಂದ ಈ ವಾರ್ಡ್ ಬಚಾವ್ ಆಗಿದೆ.

ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, ಕಳೆದ ಹತ್ತು ದಿನಗಳಿಂದ ಅತೀ ಕಡಿಮೆ ಕೋವಿಡ್ ವರದಿಗಳಾಗಿರುವ ವಾರ್ಡ್ ಗಳ ಪೈಕಿ ಪಾದರಾಯನಪುರ ವಾರ್ಡ್ ಮೊದಲನೇ ಸ್ಥಾನದಲ್ಲಿದ್ದರೆ, ಮುನೇಶ್ವರ ನಗರ ಎರಡನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಯಾವುವು:
ಕಳೆದ ಹತ್ತು ದಿನಗಳಲ್ಲಿ ಇಲ್ಲಿನ ಶಾಂತಲಾನಗರ, ಬೆಳ್ಳಂದೂರು, ಹೆಚ್‌ಎಸ್‌ಆರ್ ಲೇಔಟ್, ಆರ್ ಆರ್ ನಗರ, ಹೆಗಡೂರು, ಅರೇಕರೆ, ಹೊರಮಾವು, ವರ್ತೂರು, ಬೇಗೂರು, ವಿದ್ಯಾರಣ್ಯ ಪುರ ವಾರ್ಡ್ ಗಳಲ್ಲಿ ಅತಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

೨೧,೫೭೮ ಜನಸಂಖ್ಯೆ ಇರುವ ಈ ವಾರ್ಡ್‌ನಲ್ಲಿ ೬,೨೫೪ ಮನೆಗಳಿವೆ. ಕಳೆದ ವಾರ್ಷಿನ ಸಾಲಿನ ಏಪ್ರಿಲ್ ನಲ್ಲಿ ಸೀಲ್‌ಡೌನ್ ಮಾಡಲಾಗಿತ್ತು. ಆನಂತರ ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗಿತ್ತು. ಬಳಿಕ ಜೂನ್ ರಿಂದ ಕಂಟೈನ್‌ಮೆಂಟ್ ವಲಯದ ವ್ಯಾಪ್ತಿಯಿಂದ ಈ ವಾರ್ಡ್ ಮುಕ್ತಗೊಂಡಿದೆ.

ಇಡೀ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಮುಖವಾಗುತ್ತಿದೆ. ಆದರೆ, ಪಾದರಾಯನಪುರದ ನಿವಾಸಿಗಳು ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯಕ್ಕೆ ವಾರ್ಡ್‌ನ ಜನರು ಭಯದಿಂದ ಹೊರಗೆ ಬಂದಿದ್ದಾರೆ. ಬಿಬಿಎಂಪಿ ಕೈಗೊಂಡ ಕ್ರಮಗಳು ಮತ್ತು ಜನರು ಜಾಗೃತಿ ವಹಿಸಿದ ಕಾರಣದಿಂದ ನಿಯಂತ್ರಣ ಸಾಧ್ಯವಾಯಿತು ಎನ್ನುತ್ತಾರೆ ವಾರ್ಡಿನ ನಿವಾಸಿಗಳು.

ಕೋವಿಡ್ ನಿಯಂತ್ರಣದ ವಿಷಯದಲ್ಲಿ ಪಾದರಾಯನಪುರ ಈಗ ಮಾದರಿ ವಾರ್ಡ್ ಎನಿಸಿಕೊಂಡಿದೆ. ಬೆಂಗಳೂರಿನಲ್ಲೇ ಇದು ಸುರಕ್ಷಿತವಾದ ವಾರ್ಡ್. ಕೋವಿಡ್ ವಿಷಯದಲ್ಲಿ ಒಂದು ಸಮುದಾಯವನ್ನು ಕೆಲವರು ದೂರಿದರು. ಬೆಂಗಳೂರಿನಲ್ಲಿ ಈಗ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳಿಗೆ ಯಾರನ್ನು ದೂರುತ್ತಾರೆ. ಸಾಂಕ್ರಾಮಿಕ ರೋಗದ ವಿಷಯದಲ್ಲಿ ಒಂದು ಸಮುದಾಯವನ್ನು ಯಾರೊಬ್ಬರೂ ಗುರಿ ಮಾಡಬಾರದು.

-ಇಮ್ರಾನ್ ಪಾಷಾ, ಪಾದರಾಯನಪುರ ವಾರ್ಡಿನ ಮಾಜಿ ಸದಸ್ಯ