ಪಾದಯಾತ್ರೆ ಕೈಬಿಟ್ಟ ವಿದ್ಯಾರ್ಥಿಗಳು

ಕಲಬುರಗಿ,ಸೆ.16-ಗುಣಮಟ್ಟದ ಶಾಲಾ ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸಿ ಅಫಜಲಪುರ ತಾಲ್ಲೂಕಿನ ಘತ್ತರಗಾ ಗ್ರಾಮದ ವಿದ್ಯಾರ್ಥಿಗಳು ಮತ್ತು ಪಾಲಕರು ಘತ್ತರಗಾ ಗ್ರಾಮದಿಂದ ಕಲಬುರಗಿಯವರೆಗೆ ಆರಂಭಿಸಿದ್ದ ಪಾದಯಾತ್ರೆಯನ್ನು ಸಹಾಯಕ ಆಯುಕ್ತರು ನೀಡಿದ ಭರವಸೆ ಮೇರೆಗೆ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಸಹಾಯಕ ಆಯುಕ್ತೆ ಮೋನಾ ರೌತ್ ಅವರು ರೇಣುಕಾ ಶುಗರ್ಸ್ ಹತ್ತಿರ ಇಂದು ವಿದ್ಯಾರ್ಥಿಗಳು ಮತ್ತವರ ಪಾಲಕರ ಮನವೊಲಿಸುವ ಮೂಲಕ ವಿದ್ಯಾರ್ಥಿಗಳು ಕೈಗೊಂಡಿದ್ದ ಪಾದಯಾತ್ರೆಯನ್ನು ಮೊಟಕುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘತ್ತರಗಾ ಗ್ರಾಮದಲ್ಲಿ ಗುಣಮಟ್ಟದ ಮತ್ತು ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಾಣ ಮಾಡಲು ಅಗತ್ಯವಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಿ ಮರಳಿ ಶಾಲೆಗೆ ತೆರಳಿದ್ದಾರೆ.
ಘತ್ತರಗಾ ಗ್ರಾಮದ ಪ್ರೌಢ ಶಾಲೆ ಸಂಪೂರ್ಣವಾಗಿ ಹಾಳಾಗಿ ಇನ್ನೇನು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ ಸೆಪ್ಟಂಬರ್ 17ರಂದು ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ವಿದ್ಯಾರ್ಥಿಗಳು ಹಾಗೂ ಪೋಷಕರು ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದರು.
ಈ ಪ್ರೌಢಶಾಲೆಯಲ್ಲಿ 9 ಹಾಗೂ 10ನೇ ತರಗತಿಯ 237 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕುಳಿತುಕೊಳ್ಳಲು ಒಂದು ಒಳ್ಳೆಯ ಕೋಣೆ ಇಲ್ಲ, ಶೌಚಾಲಯ ಇಲ್ಲ, ಆಟದ ಮೈದಾನ ಇಲ್ಲ ಹೀಗೆ ಹತ್ತಾರು ಸಮಸ್ಯೆಗಳು ಈ ಶಾಲೆಯಲ್ಲಿ ಬೀಡು ಬಿಟ್ಟಿವೆ. ಇಷ್ಟು ದಿನ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಮನವಿ ಮಾಡಿ ಸಾಕಾಗಿದೆ. ಇದರಿಂದಾಗಿ ತಮ್ಮ ಹಕ್ಕು ಪಡೆಯಲು ಶಾಲೆಯಿಂದ ಇಂದು ಬೆಳಗ್ಗೆ 9 ಕ್ಕೆ ಪಾದಯಾತ್ರೆ ಮೂಲಕ ಕಲಬುರ್ಗಿಗೆ ಹೊರಟಿದ್ದರು. ಇದನ್ನು ತಿಳಿದು ಸಹಾಯಕ ಆಯುಕ್ತರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಮನ ಒಲಿಸುವ ಮೂಲಕ ಪಾದಯಾತ್ರೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.