ಪಾದಚಾರಿ ರಸ್ತೆ ಆಕ್ರಮಿಸಿಕೊಂಡಿರುವ ಪುಟ್‌ಪಾತ್ ವ್ಯಾಪಾರಿಗಳು: ತೆರವಿಗೆ ಆಗ್ರಹ

ಕುಣಿಗಲ್, ಜ. ೮- ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನ್ಯಾಯಾಲಯದ ಮುಂಭಾಗದ ಹೆದ್ದಾರಿ ರಸ್ತೆಯಲ್ಲಿ ವೃದ್ಧರು, ಕಾಲೇಜು ಯುವಕ-ಯುವತಿಯರು, ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಣಿಗಲ್ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನ್ಯಾಯಾಲಯದ ಮುಂಭಾಗದ ದೊಡ್ಡಪೇಟೆ ತಿರುವಿನವರೆಗೆ ರಸ್ತೆಯ ಪಕ್ಕದಲ್ಲಿ ಬೀದಿ ವ್ಯಾಪಾರಿಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ಪಾದಚಾರಿಗಳು, ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ ತಾಲ್ಲೂಕು ಕಚೇರಿ, ಆಸ್ಪತ್ರೆ, ಪುರಸಭೆ ಹಾಗೂ ಪೊಲೀಸ್ ಠಾಣೆ, ಬೆಸ್ಕಾಂ ಕಚೇರಿ, ಶಾಲಾ-ಕಾಲೇಜುಗಳು ಹಾಗೂ ಖಾಸಗಿ ಬಸ್ ನಿಲ್ದಾಣ ಸೇರಿದಂತೆ ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ದಿನನಿತ್ಯ ಬಸ್‌ನಿಂದ ಇಳಿದ ಸಾವಿರಾರು ಜನರು ಈ ರಸ್ತೆಯ ಎಡಭಾಗದಲ್ಲಿ ವೃದ್ಧರು ಯುವಕ-ಯುವತಿಯರು, ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಪಾದಚಾರಿಗಳಿಗೆ ತೀವ್ರ ತರದ ತೊಂದರೆ ಉಂಟಾಗಿದೆ.
ಅರ್ಧ ರಸ್ತೆಯನ್ನು ಬೀದಿ ವ್ಯಾಪಾರಿಗಳು ಅತಿಕ್ರಮ ಮಾಡಿ ಅನಧಿಕೃತವಾಗಿ ಬಟ್ಟೆ ಅಂಗಡಿ, ಕಲ್ಲಂಗಡಿ ಹಣ್ಣು, ಅವರೆಕಾಯಿ, ಅಡಿಕೆ ಎಲೆ, ಸೌತೆಕಾಯಿ ಇತರೆ ವ್ಯಾಪಾರ ಮಾಡುತ್ತಾ ಪುಟ್ಬಾತ್ ರಸ್ತೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಸಾರ್ವಜನಿಕರು ತಿರುಗಾಡಲು ತೀವ್ರ ತೊಂದರೆಯುಂಟಾಗಿದೆ.
ಈ ಬಗ್ಗೆ ಪೊಲೀಸರಾಗಲೀ, ಪುರಸಭೆ ಅಧಿಕಾರಿಗಳಾಗಲೀ ಕಂಡೂ ಕಾಣದಂತೆ ನಡೆದುಕೊಳ್ಳುತ್ತಿರುವುದು ಶೋಚನೀಯವಾಗಿದೆ. ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ಅಧಿಕಾರಿಗಳು ಗಮನಿಸಿ ಈ ವ್ಯಾಪಾರ ಸ್ಥಳವನ್ನು ತೆರವುಗೊಳಿಸಿ ಜನರ ಪ್ರಾಣವನ್ನು ಉಳಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಹಿಂದೆ ಇದೇ ಸ್ಥಳದಲ್ಲಿ ನಾಲ್ಕೈದು ಅಪಘಾತಗಳು ಸಂಭವಿಸಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.