ಕುಣಿಗಲ್, ಜೂ. ೧೭- ರಸ್ತೆಯಲ್ಲಿ ಓಡಾಡಲು ಪಾದಚಾರಿಗಳಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲವನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಯಿತು.
ಇಲ್ಲಿನ ಪುರಸಭಾ ಕಚೇರಿಯಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪುರಸಭೆ ವತಿಯಿಂದ ಪಟ್ಟಣದ ಬೀದಿ ವ್ಯಾಪಾರಿಗಳನ್ನು ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ನಡೆದ ಪೂರ್ವಭಾವಿ ಸಭೆಯಲಿ ಮಾತನಾಡಿದ ಪಟ್ಟಣದ ಬೀದಿ ವ್ಯಾಪಾರಿಗಳು, ಪುಟ್‌ಪಾತ್ ಅತಿಕ್ರಮಣ ಮಾಡಿ ನಡೆಸುತ್ತಿರುವ ಅಂಗಡಿಗಳಿಂದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಅವರಿಗೆ ವ್ಯಾಪಾರಕ್ಕಾಗಿ ಬೇರೆ ಕಡೆ ಉತ್ತಮವಾದ ಸ್ಥಳಾವಕಾಶ ಕಲ್ಪಿಸುವಂತೆ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪುಟ್ಪಾತ್ ಅತಿಕ್ರಮಿಸಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳಿಗೆ ಅನಾನುಕೂಲವಾಗುತ್ತಿದೆ. ಕೂಡಲೇ ಪುರಸಭೆ, ಪೊಲೀಸ್, ಲೋಕೋಪಯೋಗಿ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ಪೂರ್ವಭಾವಿ ಸಭೆ ನಡೆಸಿ ಈ ಕೂಡಲೇ ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ತೆಗೆದುಕೊಂಡು ಕೂಡಲೇ ರಸ್ತೆಯ ಮುಂದೆ ಹೋಟೆಲ್ ಅಂಗಡಿ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು, ಸಾರ್ವಜನಿಕರು ವಿದ್ಯಾರ್ಥಿಗಳು ಪಾದಚಾರಿ ಜನರು ರಸ್ತೆಯಲ್ಲಿ ಸಂಚರಿಸುವುದರಿಂದ ಅಪಘಾತ ಉಂಟಾಗುತ್ತವೆ. ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು ರಸ್ತೆ ಒತ್ತುವರಿ ಮಾಡಿ ವ್ಯಾಪಾರ ಮಾಡುವ ಫುಟ್ಪಾತ್ ಕೂಡಲೇ ತೆರವುಗೊಳಿಸಬೇಕು ಎಂದರು.
ಕೆಆರ್‌ಎಸ್ ಅಗ್ರಹಾರದಿಂದ, ಕುದುರೆ ಫಾರಂ ಮುಂಭಾಗದವರೆಗೂ ಎರಡು ಬದಿಯ ಚರಂಡಿಯಿಂದ ಮುಂದೆ ಬಂದಿರುವ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರು ಪ್ರಾಣ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳು, ಟೆಂಪೋಗಳು, ಲಾರಿಗಳು, ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಾರ್ಕ್ ಮಾಡುವುದರ ಮೂಲಕ ಅವರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪಟ್ಟಣದಲ್ಲಿ ಜನರು ಯಾವುದೇ ಪ್ರಾಣ ಭಯವಿಲ್ಲದೆ ಮುಕ್ತವಾಗಿ ಓಡಾಡಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂಬ ಒತ್ತಾಯವೂ ಕೇಳಿ ಬಂದವು.
ತಹಶೀಲ್ದಾರ್ ಮಹಾಬಲೇಶ್ವರ ಮಾತನಾಡಿ, ರಸ್ತೆ ಅಂಗಡಿ ಮುಂದೆ ದ್ವಿಚಕ್ರ ವಾಹನಗಳು ನಿಂತಿರುವುದನ್ನು ತೆರವುಗೊಳಿಸುವಂತಹ ಕಾರ್ಯ ಕೈಗೊಳ್ಳಬೇಕಾಗಿದೆ. ಜತೆಗೆ ಬೀದಿ ವ್ಯಾಪಾರಿಗಳಿಗೆ ಬೇರೆ ಸ್ಥಳಾವಕಾಶ ಒದಗಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಶಿವಪ್ರಸಾದ್, ಪೊಲೀಸ್ ವೃತ ನಿರೀಕ್ಷಕರಾದ ಗುರುಪ್ರಸಾದ್, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಗುರುಸಿದ್ದಪ್ಪ, ವಕೀಲರಾದ ಲಕ್ಷ್ಮಣ್ ಶೆಟ್ಟಿ, ಪುರಸಭಾ ಮ್ಯಾನೇಜರ್ ಗೀತಾ, ಪುರಸಭಾ ಕಂದಾಯ ಅಧಿಕಾರಿ ಮುನಿಯಪ್ಪ, ಸದಸ್ಯರಾದ ದೇವರಾಜ್, ಸುರೇಶ್, ದಲಿತ ಮುಖಂಡರಾದ ತಿಮ್ಮರಾಜು ಮತ್ತಿತರರು ಭಾಗವಹಿಸಿದ್ದರು.