ಪಾಣಿಪೀಠವ ಹತ್ತಿ ಶಿವನ ಪೂಜೆಯ ಅರ್ಚಕ ಹಂಪಿಯ ಭಟ್ಟರು ಶಿವೈಕ್ಯ

ಹೊಸಪೇಟೆ : ೩೬ ವರ್ಷಗಳಿಂದ ವಿಶ್ವ ವಿಖ್ಯಾತ ಹಂಪಿಯ ಬಡವಿಲಿಂಗ ದೇಗುಲ ಅರ್ಚಕರಾಗಿ ಕಾರ್ಯನಿರ್ವಹಿಸಿದ್ದ ಕಾಸರವಳ್ಳಿ ಕಷ್ಣ ಭಟ್ಟರು (೮೭) ಇಹಲೋಕವನ್ನು ತ್ಯಜಿಸಿದ್ದಾರೆ. ಸುಮಾರು ೯ ಅಡಿ ಎತ್ತರದಷ್ಟು ಎತ್ತರವಿದ್ದ ಬಡವಿ ಲಿಂಗದ ಮೇಲೆ ಎಲ್ಲರೂ ನಾಚುವಂತೆ ಕೃಷ್ಣ ಭಟ್ಟರು ಏರಿ ಪೂಜೆ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು. ಸುಮಾರು ಮೂವತ್ತಾರು ವರ್ಷದಿಂದ ಪೂಜೆ ನೆರವೇರಿಸಿಕೊಂಡು ಬಂದಿದ್ದ ಭಟ್ಟರು, ಬಡವಿಲಿಂಗ ಕೃಷ್ಣ ಭಟ್ಟರ್ ಎಂದೇ ಚಿರಪರಿಚಿತರಾಗಿದ್ದರು. ಕೃಷ್ಣ ಭಟ್ಟರನ್ನು ೧೯೭೯ರಲ್ಲಿ , ಸಾಸುವೆಕಾಳು ಗಣಪನ ಸಮೀಪದ ಸತ್ಯನಾರಾಯಣ ಪೂಜೆಗೆ ನಿಯೋಜಿಸಲಾಯಿತ್ತು. ನಂತರದ ದಿನಗಳಲ್ಲಿ ಕಂಚಿಕ್ಷೇತ್ರದ ಚಂದ್ರಶೇಖರ ಸರಸ್ವತಿ ಸ್ವಾಮೀಜಿ ಹಂಪಿ ಭೇಟಿ ನೀಡಿದಾಗ, ಬಡವಿಲಿಂಗ ಭಿನ್ನವಾಗಿಲ್ಲ. ಇದಕ್ಕೆ ದಿನಂಪ್ರತಿ ಪೂಜೆಯನ್ನು ಸಲ್ಲಿಸುವುದರಿಂದ ಒಳಿತಾಗಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆನೆಗುಂದಿಯ ಕೃಷ್ಣದೇವರಾಯ ವಂಶಸ್ಥರಾದ ಅಚ್ಯುತ್ ದೇವರಾಯರು ೧೯೮೬ರಲ್ಲಿ ಕೃಷ್ಣ ಭಟ್ಟರಿಗೆ ಬಡವಿಲಿಂಗ ವಿಗ್ರಹಕ್ಕೆ ಪೂಜೆ ಮಾಡಲು ಸೂಚಿಸಿದ್ದರು. ಇವರ ಪೂಜೆಗೆ ಪ್ರತಿ ತಿಂಗಳು ೨೦ ಕೆಜಿ ಧಾನ್ಯ ಹಾಗೂ ೩೦೦ ರೂ. ನೀಡುತ್ತಾ ಬಂದಿದ್ದಾರೆ. ಕೃಷ್ಣ ಭಟ್ಟರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿ ಗ್ರಾಮದವರಾಗಿದ್ದಾರೆ.ಕೃಷ್ಣ ಭಟ್ಟರು ೧೯೭೮-೧೯೭೯ರಿಂದ ವಿಜಯನಗರ ಸಾಮ್ರಾಜ್ಯದ ಪ್ರಮುಖ ಸ್ಮಾರಕ ಮತ್ತು ಪೂಜ್ಯನೀಯ ಬಡವಿಲಿಂಗವನ್ನು ಪ್ರತಿನಿತ್ಯ ಪೂಜೆ ಮಾಡುವ ಮೂಲಕ ಭಕ್ತರಿಗೆ ಚಿರಪರಿಚಿತರಾಗಿದ್ದರು.೧೯೭೮ರ ಆಸುಪಾಸು ಮಲೆನಾಡ ಪ್ರದೇಶದಿಂದ ಬಿಸಿಲು ನಾಡಿಗೆ ಬಂದ ಶ್ರೀ ಕೃಷ್ಣ ಭಟ್ಟರು ಅಂದಿನಿಂದ ಕಳೆದ ವರ್ಷದ ನವೆಂಬರ್‌ವರೆಗೂ ಪ್ರತಿನಿತ್ಯ ಬಡವಿಲಿಂಗಕ್ಕೆ ಬೆಳಗ್ಗೆಯಿಂದಲೇ ಧಾರ್ಮಿಕ, ವಿಧಿ ವಿಧಾನಗಳನ್ನು ನೆರವೆರಿಸುತ್ತಾ ಬಂದಿದ್ದಾರೆ. ಇಳಿವಯಸ್ಸಿನಲ್ಲೂ ಪ್ರತಿದಿನ ಬೆಳಗ್ಗೆ ೬ ಗಂಟೆಗೆ ಬಂದು, ಅತ್ಯುತ್ಸಾಹದಿಂದ ಲಿಂಗವನ್ನು ಸ್ವಚ್ಛಗೊಳಿಸಿ, ಹೂಗಳನ್ನಿಷ್ಟು ಪೂಜೆ ನೆರವೇರಿಸುತ್ತಿದ್ದ ಅವರ ಉತ್ಸಾಹಕ್ಕೆ ಯುವಕರೂ ನಾಚಲೇಬೇಕು ಎಂದು ಭಕ್ತರು ಅಭಿಪ್ರಾಯಪಡುತ್ತಾರೆ. ಮೃತ ಕೃಷ್ಣ ಭಟ್ಟರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಹಂಪಿಯ ಕೋದಂಡರಾಮ ದೇಗುಲದ ಮಾರ್ಗದಲ್ಲಿರುವ ತುಂಗಭದ್ರಾ ನದಿ ದಡದಲ್ಲಿ ಸ್ಮಾರ್ತ ಬ್ರಾಹ್ಮಣ ಸಮುದಾಯದ ವಿಧಿವಿಧಾನದ ಪ್ರಕಾರ ಭಾನುವಾರ ನಡೆಯಿತು.