ಪಾಟ್ನಾ, ಮಾ.೨೫- ಪ್ರಧಾನಿನರೇಂದ್ರ ಮೋದಿ ಉಪನಾಮವನ್ನು ವ್ಯಂಗ್ಯ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ೨ ವರ್ಷ ಜೈಲು ಶಿಕ್ಷೆ ವಿಧಿಸಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿಧಂತೆ ರಾಹುಲ್ ಗಾಂಧಿ ಏಪ್ರಿಲ್ ೧೨ ರಂದು ಪಾಟ್ನಾ ಹೈಕೋರ್ಟ್ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.೨೦೧೯ ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಸೂರತ್ ಮತ್ತು ಪಾಟ್ನಾದಲ್ಲಿ ದೂರು ದಾಖಲಾಗಿತ್ತು.ಸೂರತ್ ನಲ್ಲಿ ಮಾಜಿ ಸಚಿವ ಪೂರ್ಣೇಶ್ ಮೋದಿ ಹಾಗು ಪಾಟ್ನಾದಲ್ಲಿ ಅದೇ ವರ್ಷ ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.ಇದೀಗ ರಾಹುಲ್ ಗಾಂಧಿ ಅವರಿಗೆ ಏಪ್ರಿಲ್ ೧೨ ರಂದು ಪಾಟ್ನಾ ನ್ಯಾಯಾಲಯಕ್ಕೆ ಹಾಜರುಪಡಿಸಲು ಮತ್ತು ಅವರ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಕೇಳಲಾಗಿದೆ. ಪಾಟ್ನಾದಲ್ಲಿ ನಡೆದ ಕೊನೆಯ ವಿಚಾರಣೆಯಲ್ಲಿ ರಾಹುಲ್‌ಗೆ ಜಾಮೀನು ಸಿಕ್ಕಿತ್ತು.
ರಾಹುಲ್ ಕಾನೂನಿಗಿಂತ ದೊಡ್ಡವರಲ್ಲ;
ಈ ನಡುವೆ ಕಾಂಗ್ರೆಸ್ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ಸುಶೀಲ್ ಕುಮಾರ್ ಮೋದಿ , “ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿರುವುದು ಸತ್ಯವನ್ನು ಮಾತನಾಡಿದ್ದಕ್ಕಾಗಿ ಅಲ್ಲ, ಮೋದಿ ಉಪನಾಮದಿಂದ ಲಕ್ಷಾಂತರ ಹಿಂದುಳಿದ ಜನರನ್ನು ಅವಮಾನಿಸಿದ್ದಕ್ಕಾಗಿ” ಎಂದು ಪ್ರತಿಪಾದಿಸಿದ್ದಾರೆ.
“ಪ್ರತಿಕೂಲ ನಿರ್ಧಾರಗಳು ಬಂದಾಗ ಕಾಂಗ್ರೆಸ್ ನ್ಯಾಯಾಂಗ, ಸರ್ಕಾರ ಮತ್ತು ಮಾಧ್ಯಮಗಳತ್ತ ಬೆರಳು ತೋರಿಸುತ್ತದೆ. ರಾಹುಲ್ ಗಾಂಧಿ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳುವ ಮೂಲಕ ನ್ಯಾಯಾಂಗಕ್ಕೆ ಗೌರವ ನೀಡಬೇಕು. ರಾಹುಲ್ ಗಾಂಧಿಗಿಂತ ಮೊದಲು ಲಾಲು ಪ್ರಸಾದ್ ಯಾದವ್ ಮತ್ತು ಜಯಲಲಿತಾ ಸೇರಿದಂತೆ ೨೦೦ಕ್ಕೂ ಹೆಚ್ಚು ಜನರು ಒಂದಲ್ಲ ಒಂದು ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು ಎಂದಿದ್ದಾರೆ.ಕಾಂಗ್ರೆಸ್ ಸತ್ಯದ ಕತ್ತು ಹಿಸುಕುವ ರಾಜಕೀಯ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹಿಂದುಳಿದ ಜಾತಿಯವರನ್ನು ಕಳ್ಳರು ಎಂದು ಕರೆಯಬಹುದೇ ಹಿಂದುಳಿದ ವರ್ಗಗಳ ಜನರಿಗೆ ಉನ್ನತ ಹುದ್ದೆಗೆ ಹೋಗುವ ಹಕ್ಕನ್ನು ಸಂವಿಧಾನ ನೀಡಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.